ADVERTISEMENT

ಪ್ರವಾಸಿತಾಣವಾಗಿ ನಲ್ಲೂರು: ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್ ಕುಮಾರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 1:43 IST
Last Updated 22 ಸೆಪ್ಟೆಂಬರ್ 2020, 1:43 IST
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದ ಕೋಟೆಗೆ ಭೇಟಿ ನೀಡಿದ್ದ ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್‌ಕುಮಾರ್ ‍ಪರಿಶೀಲನೆ ನಡೆಸಿದರು
ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದ ಕೋಟೆಗೆ ಭೇಟಿ ನೀಡಿದ್ದ ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್‌ಕುಮಾರ್ ‍ಪರಿಶೀಲನೆ ನಡೆಸಿದರು   

ವಿಜಯಪುರ: ಐತಿಹಾಸಿಕ ಮತ್ತು ಜೀವ ವೈವಿಧ್ಯ ತಾಣವಾದ ನಲ್ಲೂರು ಕೋಟೆಯನ್ನು ಪ್ರವಾಸಿ ತಾಣವಾಗಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತ ನವೀನ್ ಕುಮಾರ್ ತಿಳಿಸಿದರು.

ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಕೋಟೆಯ ಹುಣಸೇತೋಪಿಗೆ ಭೇಟಿ ನೀಡಿದ್ದ ಅವರು ಪರಿಶೀಲನೆ ನಡೆಸಿ ಮಾತನಾಡಿದರು.

ಬೆಂಗಳೂರು ಸುತ್ತಮುತ್ತ ಒಂದೊಂದು ಅಡಿ ಭೂಮಿಗೂ ಬಂಗಾರದ ಬೆಲೆ ಇದೆ. ಹೀಗಿದ್ದರೂ ಪುರಾತನವಾದ ಸ್ಥಳ ಕೋಟೆ ಭಾಗವನ್ನು ಯಾರೂ ಒತ್ತುವರಿ ಮಾಡಿಕೊಂಡಿಲ್ಲ. ಇಲ್ಲಿ ಪ್ರಸಿದ್ಧ ದೇವಾಲಯವೂ ಇರುವುದರಿಂದ ಇದನ್ನು ಪ್ರವಾಸಿತಾಣವನ್ನಾಗಿ ಮಾರ್ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಸ್ಥಳೀಯರ ಸಹಕಾರವೂ ಬಹು ಮುಖ್ಯವಾಗಿದೆ ಎಂದು ಹೇಳಿದ್ದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮಿಲಲಿತೇಶ್ ಮಾತನಾಡಿ, 400 ವರ್ಷಗಳ ಇತಿಹಾಸ ಇರುವ ಹುಣಸೇ ಮರಗಳು ಸುಮಾರು 52 ಎಕರೆ ಜಾಗದಲ್ಲಿ ಹರಡಿ ಬೆಳೆದುಕೊಂಡಿವೆ. ಈ ಕಾರಣಕ್ಕಾಗಿಯೇಸರ್ಕಾರ ಜೀವ ವೈವಿಧ್ಯತಾಣ ಎಂದು ಗುರುತಿಸಿದೆ. ಇಲ್ಲಿ ಸಿನಿಮಾ ಚಿತ್ರೀಕರಣ ಮಾಡಲೂ ಉತ್ತಮವಾಗಿದೆ. ಭಾನುವಾರ ಮಂಗಳವಾರ ಶುಕ್ರವಾರ ದಿನಗಳಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅನ್ನದಾನ ನಡೆಸಲಾಗುತ್ತದೆ. ಗ್ರಾಮದ ಸುತ್ತಮುತ್ತಲಿನ ಶಾಲೆಗಳ ಮಕ್ಕಳು ಹೊರ ಸಂಚಾರ ರೂಪದಲ್ಲಿ ಒಂದು ದಿನ ಭೇಟಿ ನೀಡಿ ಆಟ ಪಾಠಗಳೊಂದಿಗೆ ಇಲ್ಲಿ ಕಾಲ ಕಳೆಯುತ್ತಾರೆ ಎಂದು ಮಾಹಿತಿ ನೀಡಿದರು.

5 ವರ್ಷಕ್ಕೊಮ್ಮೆ ಸುತ್ತಮುತ್ತಲಿನ 14 ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಸೇರಿ ಜಾತ್ರೆ ನಡೆಸುತ್ತಾರೆ. ದೀಪವನ್ನು ಹೊತ್ತು ಅಗ್ನಿ ಕುಂಡದಲ್ಲಿ ನಡೆಯುವುದು ವಿಶೇಷ. ಇದು ಚೋಳರ ಕಾಲದಿಂದಲೂ ಈ ಸಂಸ್ಕೃತಿ ನಡೆದುಕೊಂಡು ಬಂದಿದೆ. ಹಿಂದೆ ದೇವನಹಳ್ಳಿ ಕೆರೆಯಿಂದ ಈ ದೇವಾಲಯ ಪಕ್ಕದಲ್ಲಿರುವ ಕುಂಟೆಗೆ ನೀರಿನ ಸಂಪರ್ಕ ಇತ್ತು. ಇಂತಹ ಪ್ರಸಿದ್ಧ ಸ್ಥಳವನ್ನು ಮಾದರಿ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಬೇಕಿದ್ದು, ಇದಕ್ಕೆ ಅಗತ್ಯವಾಗಿರುವ ಎಲ್ಲಾ ಸಹಕಾರವನ್ನು ಪಂಚಾಯಿತಿ ನೀಡಲಿದೆ ಎಂದು ಭರವಸೆ ನೀಡಿದರು.

ರಾಜಸ್ವ ನಿರೀಕ್ಷಕ ಜನಾರ್ಧನ್, ಗ್ರಾಮ ಲೆಕ್ಕಾಧಿಕಾರಿ ಗೌತಮ್, ಸಹಾಯಕ ಸಂತೋಷ್, ನಲ್ಲೂರು ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ನಿರ್ದೇಶಕ ಆನಂದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜ್, ದೇವಾಲಯ ಸಮಿತಿ ಸದಸ್ಯ ಭೀಮಣ್ಣ, ಅರ್ಚಕ ಅಶ್ವಥ್‌ನಾರಾಯಣ, ಕರ ವಸೂಲಿಗಾರ ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.