ADVERTISEMENT

ಬ್ರಾಹ್ಮಣ ಸಮಾಜ ಎಲ್ಲರಿಗೆ ಮಾರ್ಗದರ್ಶನ ಮಾಡಬೇಕು: ನಾರಾಯಣಸ್ವಾಮಿ

ವಿಜಯಪುರದಲ್ಲಿ ನೂತನ ಕಲ್ಯಾಣಮಂಟಪದ ಕಟ್ಟಡ ಶಂಕುಸ್ಥಾಪನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:10 IST
Last Updated 19 ಅಕ್ಟೋಬರ್ 2018, 12:10 IST
ವಿಜಯಪುರದ ಬ್ರಾಹ್ಮಣ ಸೇವಾ ಟ್ರಸ್ಟ್ ನಿಂದ ನಿರ್ಮಾಣವಾಗಲಿರುವ ಕಲ್ಯಾಣ ಮಂಟಪದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಉದ್ಘಾಟನೆ ಮಾಡಿದರು
ವಿಜಯಪುರದ ಬ್ರಾಹ್ಮಣ ಸೇವಾ ಟ್ರಸ್ಟ್ ನಿಂದ ನಿರ್ಮಾಣವಾಗಲಿರುವ ಕಲ್ಯಾಣ ಮಂಟಪದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಉದ್ಘಾಟನೆ ಮಾಡಿದರು   

ವಿಜಯಪುರ: ಬ್ರಾಹ್ಮಣ ಸಮಾಜದವರು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವಂತಹ ಕಾರ್ಯವನ್ನು ಮಾಡುವ ಮೂಲಕ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ಪಕ್ಕದಲ್ಲಿ ಬ್ರಾಹ್ಮಣ ಸೇವಾ ಟ್ರಸ್ಟಿನ ಮೂಲಕ ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ಕಲ್ಯಾಣಮಂಟಪದ ಕಟ್ಟಡ ಶಂಕುಸ್ಥಾಪನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

ಸಮಾಜದಲ್ಲಿ ಎಲ್ಲಾ ಜಾತಿ ವರ್ಗಗಳ ಹಿತವನ್ನು ಬಯಸುವುದರ ಜೊತೆಗೆ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸನ್ಮಾರ್ಗದಲ್ಲಿ ಮುನ್ನಡೆಸಬೇಕಾಗಿರುವ ಹೊಣೆಗಾರಿಕೆ ಬ್ರಾಹ್ಮಣ ಸಮುದಾಯದ ಮೇಲಿದೆ. ಸಮಾಜದಲ್ಲಿ ಮೇಲು, ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕು ಕಟ್ಟಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಲ್ಯಾಣ ಮಂಟಪಕ್ಕೆ ಅಗತ್ಯವಾಗಿರುವ ಸಹಕಾರ ನೀಡುವುದಾಗಿ ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಮಾತನಾಡಿ, ಹಿಂದೂ ಧರ್ಮಕ್ಕಿರುವ ಸಾವಿರಾರು ವರ್ಷಗಳ ಇತಿಹಾಸ, ಮತ್ತು ಉತ್ತಮ ಪರಂಪರೆಯನ್ನು ಉಳಿಸಿಕೊಂಡು ಹೋಗುವಂತಹ ಮಹತ್ತರವಾದ ಕಾರ್ಯವಾಗಬೇಕು. ರಾಜ್ಯದಲ್ಲಿರುವ 36 ಸಾವಿರ ಮುಜುರಾಯಿ ದೇವಾಲಯಗಳಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಬ್ರಾಹ್ಮಣರ ನೆರವಿಗೆ ಸರ್ಕಾರ ಬರಬೇಕು. ದೇಶದಲ್ಲಿ 35 ಲಕ್ಷ ಬ್ರಾಹ್ಮಣರಿದ್ದಾರೆ. ಬ್ರಾಹ್ಮಣರು ಬುದ್ಧಿಜೀವಿಗಳು ಆದ್ದರಿಂದ ಸಮಾಜವನ್ನು ಯಾವಾಗಲೂ ಉತ್ತಮವಾದ ಮಾರ್ಗದಲ್ಲೆ ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಧರ್ಮಕ್ಕೆ ಎಂದಿಗೂ ಅಪಚಾರವಾಗಬಾರದು. ಧರ್ಮದ ಶ್ರೇಷ್ಠತೆಯನ್ನು ಎಲ್ಲರೂ ಕಾಪಾಡಬೇಕಾಗಿದೆ. ಸ್ವಾತಂತ್ರ್ಯ ಬಂದು 72 ವರ್ಷಗಳ ಕಳೆದರೂ ಇದುವರೆಗೂ ಅವರಿಗೆ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ನೀಡುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಪ್ರತಿಭಾವಂತರನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು. ಪ್ರತಿಯೊಬ್ಬ ಬ್ರಾಹ್ಮಣ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ಬ್ರಾಹ್ಮಣರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು. ಸರ್ಕಾರದಿಂದ ಸಿಗಬೇಕಾಗಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮುದಾಯವನ್ನು ಬಲವರ್ಧನೆ ಮಾಡಿಕೊಳ್ಳಬೇಕು. ಜಿಲ್ಲಾ ಪಂಚಾಯಿತಿಯಿಂದ ಸಿಗಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಬ್ರಾಹ್ಮಣ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಎಸ್.ಮುರಳೀಧರ ಭಟ್ಟಾಚಾರ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ವಿ.ವೆಂಕಟನಾರಾಯಣ, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ದೇವನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ದೇ.ಸು.ನಾಗರಾಜ್, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸದಸ್ಯರಾದ ಆರ್.ಸಿ.ಮಂಜುನಾಥ್, ಎಂ.ಸತೀಶ್ ಕುಮಾರ್, ಎಸ್.ಭಾಸ್ಕರ್, ಕೇಶವಪ್ಪ, ಎ.ಪಿ.ಎಂ.ಸಿ.ಅಧ್ಯಕ್ಷ ಮಂಜುನಾಥ್, ಶೇಷಗಿರಿರಾವ್, ಕುಮಾರಸ್ವಾಮಿ.ಎಸ್, ಸತೀಶ್.ಜಿ, ಸೂರ್ಯನಾರಾಯಣ.ಜಿ, ಚಂದ್ರಮೌಳಿ.ಎಸ್, ರವಿ.ವಿ.ಎಸ್, ವೀಣಾಪ್ರಕಾಶ್, ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.