ADVERTISEMENT

ಸರ್ವರ್ ಸ್ಥಗಿತ: ದಾಖಲೆಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:15 IST
Last Updated 30 ಸೆಪ್ಟೆಂಬರ್ 2020, 4:15 IST
ಕಂಪ್ಯೂಟರ್‍ನಲ್ಲಿ ಕಂಡು ಬರುವ ಸ್ಥಗಿತಗೊಂಡಿರುವ ಮಾಹಿತಿ
ಕಂಪ್ಯೂಟರ್‍ನಲ್ಲಿ ಕಂಡು ಬರುವ ಸ್ಥಗಿತಗೊಂಡಿರುವ ಮಾಹಿತಿ   

ದೇವನಹಳ್ಳಿ: ಪುರಸಭೆ ಆಡಳಿತ ಕಚೇರಿಯಲ್ಲಿ ಸರ್ವರ್ ಸ್ಥಗಿತಗೊಂಡ ಪರಿಣಾಮ ಕಟ್ಟಡ ಅನುಮತಿಗಾಗಿ ಅರ್ಜಿ ಸಲ್ಲಿಸಿದವರು ಪರದಾಡುವಂತಾಗಿದೆ.

ನಿವೇಶನ ಖರೀದಿಸಿರುವವರು ಮತ್ತು ಪಿತ್ರಾರ್ಜಿತ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮೊದಲ ಹಂತದಲ್ಲಿ ಪುರಸಭೆಯಲ್ಲಿ ಕಟ್ಟಡದ ನಕಾಶೆಯ ಅನುಮತಿ ಪಡೆಯಬೇಕು. ಇದಕ್ಕಾಗಿ ಪುರಸಭೆ ಕಚೇರಿಯಲ್ಲಿ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರ್ವರ್ ಮೂಲಕ ಬೈಯಾಪ ಇಲಾಖೆಗೆ ಅಪ್ ಲೋಡ್ ಮಾಡಬೇಕು. ಸರ್ವರ್ ಸ್ಥಗಿತಗೊಂಡರುವುದರಿಂದ ಕಳೆದ ಹದಿನೈದು ದಿನಗಳಿಂದ ಅಲೆಯುತ್ತಿದ್ದರೂ ಸರ್ವರ್ ಸರಿಹೋಗಿಲ್ಲ ಎಂಬುದು ಸ್ಥಳೀಯರ ಆರೋಪ .

ಪುರಸಭೆ ಕಚೇರಿಯಿಂದ ಆಪ್ ಲೋಡ್ ಮಾಡಿ ಬೈಯಾಪ ಕಚೇರಿಗೆ ರವಾನಿಸಿದರೆ ಬೈಯಾಪ ಕಚೇರಿ ಅಧಿಕಾರಿಗಳು ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿರುವ ನಿವೇಶನವನ್ನು ಪರಿಶೀಲಿಸಿ ನಿವೇಶನ ಸಂಪರ್ಕ ಕಲ್ಪಿಸುವ ರಸ್ತೆ ಉದ್ಯಾನ ವಿವಿಧ ಅಯಾಮಗಳನ್ನು ಲೆಕ್ಕಹಾಕಿ ಕಟ್ಟಡದ ನಕಾಶೆಗೆ ಇಂತಿಷ್ಟು ಶುಲ್ಕವನ್ನು ನಿಗಧಿ ಮಾಡುತ್ತಾರೆ. ಶುಲ್ಕವನ್ನು ಬ್ಯಾಂಕಿನಲ್ಲಿ ಪಾವತಿಸಿ ಡಿ.ಡಿ. ಮೂಲಕ ನೀಡಬೇಕು. ನಂತರ ಕಟ್ಟಡ ಅನುಮತಿಗೆ ಮತ್ತೆ ಬೈಯಾಪ ವತಿಯಿಂದ ಕಡತವನ್ನು ಅಪ್ ಲೋಡ್ ಮಾಡಿದ ನಂತರ ಪುರಸಭೆಗೆ ಬರುತ್ತದೆ. ಇದಕ್ಕಾಗಿ ಹಲವಾರು ಬಾರಿ ಸುತ್ತಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಜಯರಾಮ್.

ADVERTISEMENT

ಪುರಸಭೆಗೆ ಕಡತ ಡೌನ್ ಲೋಡ್ ಮಾಡಿಕೊಂಡ ನಂತರ ಕಟ್ಟಡ ನಿರ್ಮಾಣದ ಅನುಮತಿಗೆ ಪುರಸಭೆ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಅನುಮತಿಗೆ ಶುಲ್ಕ ವಿಧಿಸುತ್ತಾರೆ. ಅ ಶುಲ್ಕವನ್ನು ಮತ್ತೆ ಬ್ಯಾಂಕ್‍ನಲ್ಲಿ ಪಾವತಿಸಬೇಕು, ಶುಲ್ಕ ಕಟ್ಟಿದ ಖಾತರಿಗೆ ಬ್ಯಾಂಕ್ ಚಲನ್ ತಂದು ನಿರ್ಮಾಣ್‌ ಸಾಫ್ಟ್‌ವೇರ್‌ಗೆ ಅಫ್ ಲೋಡ್ ಮಾಡಿಸಬೇಕು. ಇದಾದ ನಂತರ ಹೆಬ್ಬೆಟ್ಟು ಪ್ರಕ್ರಿಯೆ ಅದ ನಂತರವಷ್ಟೆ ಕಟ್ಟಡದ ಅನುಮತಿ ಪ್ರಮಾಣ ಪತ್ರ ಕೈಗೆ ಸೇರುತ್ತದೆ. ಈ ಹಿಂದೆ ನಿರ್ಮಾಣ್‌ 1ರ ಸಾಫ್ಟ್‌ವೇರ್‌ಗೆ ಸರ್ವರ್ ತೊಂದರೆ ಇರಲಿಲ್ಲ. ಪ್ರಸುತ್ತ ನಿರ್ಮಾಣ್‌ – 2 ಸಾಫ್ಟ್‌ವೇರ್‌ ವ್ಯರ್ಥ ಕಸರತ್ತಾಗಿದೆ ಎನ್ನುತ್ತಾರೆ ಪುರಸಭೆ ಸದಸ್ಯ ಜಿ.ಎ.ರವೀಂದ್ರ.

ನೂತನ ಸಾಫ್ಟ್‌ವೇರ್‌ ನಿರ್ಮಾಣ - 2 ಐ.ಡಿ.ಎಸ್ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ., ಜನವರಿಯಿಂದ ಅಡೆತಡೆ ನಡುವೆ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದೆ. 8 ತಿಂಗಳಿಂದ ಕೇವಲ 50 ಕಟ್ಟಡಕ್ಕೆ ಅನುಮತಿ ನೀಡಲು ಸಾಧ್ಯವಾಗಿದ್ದು, ಅನುಮತಿಗಾಗಿ ಬಂದಿರುವ ಅರ್ಜಿಗಳು ಇವೆ., ಬರಿ ದೇವನಹಳ್ಳಿ ಪುರಸಭೆ ಸಮಸ್ಯೆ ಅಲ್ಲ ಇಡಿ ರಾಜ್ಯದ ಸಮಸ್ಯೆಯಾಗಿದೆ ಎಂದು ಅಪರೇಟರ್ ಜಗದೀಶ್ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.