ADVERTISEMENT

ದೇವನಹಳ್ಳಿ | ದೈಹಿಕ ಅಶಕ್ತರಿಗೆ ಸಂಕಷ್ಟ: ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆ

ಮೂಲ ಸೌಕರ್ಯ ಕೊರತೆ ವ್ಹೀಲ್‌ಚೇರ್‌ ಇದ್ದರೂ ಪ್ರಯೋಜನೆ ಇಲ್ಲ । ಲಿಫ್ಟ್‌ ಇಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:39 IST
Last Updated 3 ಜುಲೈ 2025, 15:39 IST
ದೇವನಹಳ್ಳಿಯ ಉಪನೋಂದಣಾಧಿಕಾರಿಗಳ ಕಚೇರಿಗೆ ದೈಹಿಕ ನೂನ್ಯತೆ ಇರುವವರನ್ನು ಹೊತ್ತು ಸಾಗುತ್ತಿರುವ ದೃಶ್ಯ
ದೇವನಹಳ್ಳಿಯ ಉಪನೋಂದಣಾಧಿಕಾರಿಗಳ ಕಚೇರಿಗೆ ದೈಹಿಕ ನೂನ್ಯತೆ ಇರುವವರನ್ನು ಹೊತ್ತು ಸಾಗುತ್ತಿರುವ ದೃಶ್ಯ   

ದೇವನಹಳ್ಳಿ: ಸರ್ಕಾರದ ಬೊಕ್ಕಸಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ವರಮಾನ ತಂದು ಕೊಂಡುವ, ರಾಜ್ಯದಲ್ಲಿ ಅತೀ ಹೆಚ್ಚು ಸ್ವತ್ತುಗಳ ನೋಂದಣಿ ನಡೆಯುವ ದೇವನಹಳ್ಳಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ.

ನಿತ್ಯ ಸಾವಿರಾರು ಜನರು ಈ ಕಚೇರಿಯಲ್ಲಿ ಸರ್ಕಾರಿ ಸೇವೆ ಪಡೆಯಲು ಆಗಮಿಸುತ್ತಾರೆ. ತಾಲ್ಲೂಕು ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಗೆ ದೈಹಿಕ ಅಶಕ್ತರು, ಹಿರಿಯ ನಾಗರಿಕರು ಸೇರಿದಂತೆ ದೈಹಿಕ ನೂನ್ಯತೆ ಇರುವವರು ಹೋಗುವುದೇ ಕಷ್ಟವಾಗಿದೆ.

ನೋಂದಣಾಧಿಕಾರಿಗಳ ಕಚೇರಿಯಲ್ಲಿ ವೀಲ್ಹ್‌ಚೇರ್‌ ವ್ಯವಸ್ಥೆ ಇದ್ದರೂ, ಅದರ ಮೂಲಕ ಸುಲಭವಾಗಿ ಮೊದಲನೇ ಮಹಡಿ ತಲುಪದಂತಹ ದುಸ್ಥಿತಿ ಎದ್ದು ಕಾಣುತ್ತಿದೆ. ತಾಲ್ಲೂಕು ಆಡಳಿತವೂ ಅಶಕ್ತರಿಗೆ ನೆರವಾಗಲು ಲಿಫ್ಟ್ ಅಳವಡಿಸುತ್ತೇವೆ ಎಂದು ಹುಸಿ ಆಶ್ವಾಸನೆಯನ್ನು ಸಾಕಷ್ಟು ವರ್ಷಗಳಿಂದ ಹೇಳಿಕೊಂಡೇ ಬರುತ್ತಿದೆ.

ADVERTISEMENT

ಯಾವುದೇ ಜಮೀನುಗಳ ವಹಿವಾಟನ್ನು ನೋಂದಣಿ ಮಾಡಿಸಲು ಬರುವವರು, ಅವರ ಕುಟುಂಬಸ್ಥರನ್ನೆಲ್ಲಾ ಕರೆತಂದು ಸಹಿ ಮಾಡಿಸುವುದು ಅನಿವಾರ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು, ವಯೋಸಹಜವಾಗಿ ದೈಹಿಕ ಬಲಹೀನರಾಗಿರುವವರು ಇರುತ್ತಾರೆ.

ಇಂತಹ ಅಶಕ್ತರನ್ನು ಉಪನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಲು ಹತ್ತಾರು ಜನರು ಅವರನ್ನು ವೀಲ್ಹ್‌ ಚೇರ್‌ನಲ್ಲಿ ಕುಳ್ಳರಿಸಿ, ಮೆರವಣಿಗೆ ರೀತಿಯಲ್ಲಿ ಮೆಟ್ಟಲುಗಳ ಮೂಲಕ ಕರೆದೊಯ್ಯಬೇಕಿದೆ.

ಸಾಕಷ್ಟು ಸಾರ್ವಜನಿಕರು ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಅಂಗವಿಕಲ ಸ್ನೇಹಿ, ಹಿರಿಯ ನಾಗರಿಕರಿಗೆ ಅನುಕೂಲವಾಗುಂತೆ ಕಚೇರಿ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದರೂ, ಯಾವುದೇ ರೀತಿಯಲ್ಲಿ ಪರಿಹಾರ ಇಂದಿಗೂ ನಿಡುವಲ್ಲಿ ಆಡಳಿತ ವರ್ಗವೂ ಸೋತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಹೆಂಗಪ್ಪ ನಡಿಲಿ... ದೇವನಹಳ್ಇ ತಾಲ್ಲೂಕು ಕಚೇರಿಗೆ ಆಗಮಿಸಿದ್ದ ನಡೆದಾಡಲು ಆಗದ ವೃದ್ಧೆಯನ್ನು ಕಚೇರಿಗೆ ಕರೆದುಕೊಂಡು ಹೋಗುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.