ADVERTISEMENT

ಕಾರ್ಯಕ್ರಮದಲ್ಲಿ ತಾರತಮ್ಯ ಬೇಡ

ದೊಡ್ಡಬಳ್ಳಾಪುರದಲ್ಲೂ ಆಯೋಜಿಸಿ: ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 6:43 IST
Last Updated 13 ಅಕ್ಟೋಬರ್ 2022, 6:43 IST
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಸಭೆ ನಡೆಯಿತು
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಸಭೆ ನಡೆಯಿತು   

ದೊಡ್ಡಬಳ್ಳಾಪುರ: ‘ಅಧಿಕೃತವಾಗಿ ಇಂತಹದ್ದೇ ತಾಲ್ಲೂಕು, ಜಿಲ್ಲಾ ಕೇಂದ್ರ ಎಂದು ಘೋಷಣೆ ಆಗಿಲ್ಲ. ಹೀಗಾಗಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆಯುವ ಸಮಾರಂಭಗಳನ್ನು ಜಿಲ್ಲೆಯ ಉಪ ವಿಭಾಗದ ಕೇಂದ್ರವಾಗಿರುವ ದೊಡ್ಡಬಳ್ಳಾಪುರದಲ್ಲಿಯೇ ಆಚರಿಸಬೇಕು. ತಾರತಮ್ಯ ಮಾಡಬಾರದು’ ಎಂದು ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ರಾಜಘಟ್ಟ ರವಿ ಹೇಳಿದರು.

ಅವರು ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದರು.

ಜನರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಇರಲಿ ಎನ್ನುವ ದೃಷ್ಟಿಯಿಂದ ಚರಪ್ಪರದಕಲ್ಲು ಗ್ರಾಮದ ಸಮೀಪ ಕಚೇರಿ ಸ್ಥಾಪನೆಯಾಗಿದೆಯೇ ಹೊರತು, ಅರ್ಹತೆಯ ಮಾನದಂಡದ ಆಧಾರದ ಮೇಲೆ ಜಿಲ್ಲಾಧಿಕಾರಿ ಕಚೇರಿ ಸ್ಥಾಪನೆಯಾಗಿಲ್ಲ ಎಂದು ಹೇಳಿದರು.

ADVERTISEMENT

ಜಿಲ್ಲಾ ಕೇಂದ್ರವಾಗುವ ಎಲ್ಲಾ ಮಾನದಂಡ, ಅರ್ಹತೆಯು ದೊಡ್ಡಬಳ್ಳಾಪುರಕ್ಕೆ ಇದೆ. ಹೀಗಾಗಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆಯುವ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲೇ ನಡೆಸಬೇಕು ಎಂದರು.

ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜೀವ್‌ ನಾಯ್ಕ್‌ ಮಾತನಾಡಿ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ದೊಡ್ಡಬಳ್ಳಾಪುರದಲ್ಲೇ ನಡೆಸುವಂತೆ ಅ. 13 ರದು ಬೆಳಿಗ್ಗೆ 11ಗಂಟೆಗೆ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಮುಖಂಡರ ನಿಯೋಗ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ಮುಖಂಡರಾದ ಡಿ.ಪಿ. ಆಂಜನೇಯ, ಪರಮೇಶ್, ತೂಬಗೆರೆ ಷರೀಫ್‌, ಕೆ. ವೆಂಕಟೇಶ್‌, ಪಿ. ಗೋವಿಂದರಾಜ್‌, ಚಿದಾನಂದ್‌, ದಿವಾಕರ್‌ ನಾಗ್‌, ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.