ADVERTISEMENT

ದೇವನಹಳ್ಳಿ: ಶೌಚಾಲಯವೂ ಇಲ್ಲದ ಜಿಲ್ಲಾಡಳಿತ ಭವನ

ಮೂಲಸೌಕರ್ಯ ಕೊರತೆ, ನಾಗರಿಕರ ಆಕ್ರೋಶ

ಎಂ.ಮುನಿನಾರಾಯಣ
Published 3 ನವೆಂಬರ್ 2018, 14:30 IST
Last Updated 3 ನವೆಂಬರ್ 2018, 14:30 IST
ದೇವನಹಳ್ಳಿಯ ಬೀರಸಂದ್ರದ ಬಳಿ ಉದ್ಘಾಟನೆಗೊಂಡಿರುವ ನೂತನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜೆಸಿಬಿ ಯಂತ್ರದಲ್ಲಿ ಕಾಮಗಾರಿ ಮಾಡುತ್ತಿರುವುದು
ದೇವನಹಳ್ಳಿಯ ಬೀರಸಂದ್ರದ ಬಳಿ ಉದ್ಘಾಟನೆಗೊಂಡಿರುವ ನೂತನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜೆಸಿಬಿ ಯಂತ್ರದಲ್ಲಿ ಕಾಮಗಾರಿ ಮಾಡುತ್ತಿರುವುದು   

ವಿಜಯಪುರ: ದೇವನಹಳ್ಳಿಯ ಬೀರಸಂದ್ರದ ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಂಕೀರ್ಣ ಉದ್ಘಾಟನೆಯಾಗಿರುವುದು ಸಂತಸ ವಿಷಯವೇ ಆಗಿದೆ. ಆದರೆ, ಮೂಲಸೌಕರ್ಯ ಕೊರತೆಯಿಂದಾಗಿ ಸರ್ಕಾರಕ್ಕೆ ಸಾರ್ವಜನಿಕರು ‌ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖಂಡ ಶಿವಕುಮಾರ್ ಆರೋಪಿಸಿದರು.

ಜಿಲ್ಲಾಡಳಿತ ಸಂಕೀರ್ಣದ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕವೇ ಉದ್ಘಾಟನೆ ಮಾಡಬಹುದಿತ್ತು. ಕೇವಲ ಜಿಲ್ಲಾಧಿಕಾರಿ ಕಚೇರಿಗೆ ಬೇಕಾಗಿರುವ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡಿದ್ದಾರೆ. ತರಾತುರಿಯಲ್ಲಿ ಉದ್ಘಾಟನೆ ಮಾಡುವ ಅಗತ್ಯವಿರಲಿಲ್ಲ ಎಂದರು.

ಹೋರಾಟಗಾರ ರಾಜಪ್ಪ ಮಾತನಾಡಿ, ವಿವಿಧ ಇಲಾಖೆಗಳಿಗೆ ನಿಗದಿ ಪಡಿಸಿರುವ ಕೊಠಡಿಗಳ ನವೀಕರಣ ಕಾರ್ಯವೂ ನಡೆಯುತ್ತಿದೆ. ಇಲಾಖೆಗಳಿಗೆ ಸಂಬಂಧಿಸಿದ ಕಡತಗಳನ್ನು ಮೂಟೆಗಳಲ್ಲಿ ತಂದು ಸುರಿದಿದ್ದಾರೆ. ಅವು ಅನಾಥವಾಗಿ ಬಿದ್ದಿವೆ. ಆಕಸ್ಮಾತ್ ಕಡತಗಳು ನಾಪತ್ತೆಯಾದರೆ ಯಾರು ಹೊಣೆ ಎನ್ನುವ ಆತಂಕವೂ ಜನರನ್ನು ಕಾಡುತ್ತಿದೆ ಎಂದರು.

ADVERTISEMENT

ಮುಖಂಡ ರಾಮಕೃಷ್ಣಪ್ಪ ಮಾತನಾಡಿ, ದೇವನಹಳ್ಳಿ ಬಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಇಲ್ಲಿನ ಜಮೀನುಗಳ ಬೆಲೆಗಳು ಕೋಟ್ಯಂತರ ರೂಪಾಯಿಗಳಷ್ಟು ಏರಿಕೆ ಕಂಡಿವೆ. ಇದರ ಪರಿಣಾಮವಾಗಿ ಜಮೀನು ವ್ಯಾಜ್ಯ ಪ್ರಕರಣಗಳು ಹೆಚ್ಚಾಗತೊಡಗಿದ್ದವು. ಬಹಳಷ್ಟು ಮಂದಿ ಬಡವರು ಬೆಂಗಳೂರಿಗೆ ಹೋಗಿ ಬರಬೇಕಾದರೆ ಒಂದು ದಿನ ಪೂರ್ತಿ ವ್ಯರ್ಥವಾಗುತ್ತಿತ್ತು. ಈಗ ಇಲ್ಲಿ ಮಾಡಿರುವುದು ಖುಷಿ ತಂದಿದೆ. ಆದರೂ ಯಾವ ಕೆಲಸಗಳೂ ಪೂರ್ಣಗೊಳ್ಳದೆ, ಇಲ್ಲಿಗೆ ಬರುವ ಜನರಿಗೆ ಕನಿಷ್ಠ ಶೌಚಾಲಯಗಳು, ಕುಡಿಯುವ ನೀರೂ ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಮಹಿಳಾ ಅಧಿಕಾರಿಯೊಬ್ಬರು ಮಾತನಾಡಿ, ‘ಬೆಂಗಳೂರಿನಿಂದ ಇಲ್ಲಿಗೆ ಸ್ಥಳಾಂತರ ಮಾಡಿದ್ದಾರೆ. ಇಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ನೆಮ್ಮದಿಯಾಗಿ ಊಟ ಮಾಡಲಿಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ನಮಗೆ ಕೊಟ್ಟಿರುವ ಕೊಠಡಿಯೂ ಚಿಕ್ಕದಾಗಿದೆ. ವಿದ್ಯುತ್ ವ್ಯವಸ್ಥೆಯಿಲ್ಲದೆ ಏನು ಕೆಲಸಗಳೂ ನಡೆಯುತ್ತಿಲ್ಲ. ಕೆಲವು ಕೊಠಡಿಗಳಲ್ಲಿ ದೂಳು ತುಂಬಿದೆ. ಇದರಿಂದ ನಾವೂ ಅನಾರೋಗ್ಯಕ್ಕೆ ಸಿಲುಕುವಂತಾಗಿದೆ. ಶೌಚಾಲಯಕ್ಕೆ ಹೋಗಬೇಕಾದರೆ ಪೊಲೀಸ್ ಠಾಣೆಗೆ ಹೋಗಬೇಕು. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಮೇಲಧಿಕಾರಿಗಳನ್ನು ಕೇಳಿದರೆ ಸ್ವಲ್ಪ ದಿನ ತಾಳಿಕೊಳ್ಳಿ; ಎಲ್ಲವೂ ಸರಿಹೋಗುತ್ತದೆ’ ಎನ್ನುತ್ತಾರೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳು, ಇಲ್ಲಿಗೆ ಬರುವ ಜನರಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯವನ್ನು ತ್ವರಿತವಾಗಿ ಮಾಡಿಕೊಡಬೇಕು ಎಂದು ಕೆಲ ವಕೀಲರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.