ADVERTISEMENT

‘ಜೀವನ ರೂಪಿಸಲು ಅಂಕಪಟ್ಟಿ ಮಾನದಂಡವಲ್ಲ’

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 15:53 IST
Last Updated 19 ಆಗಸ್ಟ್ 2019, 15:53 IST
ವಿಜಯಪುರ ಬಳಿಯ ಬೆಟ್ಟಕೋಟೆ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಬಾಲ್ ಹಾಕುವ ಮುಖಾಂತರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಹುಸೇನ್ ಉದ್ಘಾಟಿಸಿದರು
ವಿಜಯಪುರ ಬಳಿಯ ಬೆಟ್ಟಕೋಟೆ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಬಾಲ್ ಹಾಕುವ ಮುಖಾಂತರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಹುಸೇನ್ ಉದ್ಘಾಟಿಸಿದರು   

ವಿಜಯಪುರ: ಕ್ರೀಡೆಗಳು ವ್ಯಕ್ತಿತ್ವ ವಿಕಸನದ ಜೊತೆಗೆ ಮಾನಸಿಕ ಆರೋಗ್ಯ ಸದೃಢತೆಗೆ ಅವಕಾಶ ಮಾಡಿಕೊಡುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರೀಡಾ ಚಟುವಟಿಕೆಗೆ ಹೆಚ್ಚು ಪ್ರೋತ್ಸಾಹ ಮಾಡುತ್ತಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಹುಸೇನ್ ಹೇಳಿದರು.

ಸಮೀಪದ ಬೆಟ್ಟಕೋಟೆ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಕ್ರೀಡೆ ಅಷ್ಟೇ ಮುಖ್ಯ. ವಿದ್ಯಾಭ್ಯಾಸದಲ್ಲಿ ಎಲ್ಲ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಬಹುದು. ಆದರೆ ಕ್ರೀಡೆಯಲ್ಲಿ ಒಬ್ಬ ವಿದ್ಯಾರ್ಥಿ ಗುರಿ ಮುಟ್ಟಲಿಕ್ಕೆ ಎಲ್ಲರ ಬೆಂಬಲ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ADVERTISEMENT

‘ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ. ಸೋಲು-ಗೆಲುವು ಜೀವನದ ಭಾಗಗಳು. ಸೋತವರು ಗೆಲ್ಲಲೇಬೇಕು. ಗೆಲುವು ನಮ್ಮದೇ ಎನ್ನುವ ದೃಷ್ಟಿಯಲ್ಲೇ ಸಾಗುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಒಂದು ವೇಳೆ ಒಮ್ಮೆ ಸೋಲನ್ನು ಕಂಡರೂ ಸೋಲು ಅನೇಕ ಪಾಠಗಳನ್ನು ಕಲಿಸುತ್ತದೆ’ ಎಂದರು.

ನಿವೃತ್ತ ದೈಹಿಕ ಶಿಕ್ಷಕ ಅಶ್ವಥನಾರಾಯಣ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಹಾಕಿ ಮತ್ತು ಬ್ಯಾಸ್ಕೆಟ್ ಬಾಲ್, ಥ್ರೋಬಾಲ್ ಆಟಗಳ ಬಗ್ಗೆ ಮಾಹಿತಿ ಇರಲಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳಿಗೂ ಎಲ್ಲ ಆಟಗಳ ಪರಿಚಯವಾಗಬೇಕು. ಪ್ರತಿಯೊಂದು ಕ್ರೀಡೆಯಲ್ಲಿನ ಮಹತ್ವ ಅವರು ಅರಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದರು.

‘ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಜೀವನದಲ್ಲಿ ಉದ್ಯೋಗ ಗಳಿಸಲಿಕ್ಕೆ ಅಂಕಗಳ ಮಾನದಂಡವಿದೆ. ಜೀವನ ರೂಪಿಸಿಕೊಳ್ಳಲಿಕ್ಕೆ ನೀವು ಮಾಡುವ ಒಂದೊಂದು ಕೆಲಸಗಳೂ ಉಪಕಾರಿಗಳಾಗುತ್ತವೆ’ ಎಂದರು.

ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ್, ಶಾಲಾ ಮುಖ್ಯಶಿಕ್ಷಕ ಪ್ರಕಾಶ್, ಸಹಶಿಕ್ಷಕ ರವಿಕುಮಾರ್‌ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.