ADVERTISEMENT

ಅಂಗವಿಕಲರ ಹಕ್ಕು ರಕ್ಷಣೆಗೆ ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 13:18 IST
Last Updated 6 ಜುಲೈ 2019, 13:18 IST
ಅಂಗವಿಕಲರ ಕಲ್ಯಾಣ ಸಭೆಯಲ್ಲಿ ರಾಜ್ಯ ಆಯುಕ್ತರಾದ ವಿ.ಎಸ್. ಬಸವರಾಜು ಮಾತನಾಡಿದರು
ಅಂಗವಿಕಲರ ಕಲ್ಯಾಣ ಸಭೆಯಲ್ಲಿ ರಾಜ್ಯ ಆಯುಕ್ತರಾದ ವಿ.ಎಸ್. ಬಸವರಾಜು ಮಾತನಾಡಿದರು   

ದೇವನಹಳ್ಳಿ: ಅಂಗವಿಕಲರ ಮೂಲಭೂತ ಹಕ್ಕುಗಳು ಕಾನೂನಾತ್ಮಕವಾಗಿ ರಕ್ಷಣೆಯಾಗಬೇಕು ಹಾಗೂ ಎಲ್ಲ ರೀತಿಯ ಸೌಲಭ್ಯಗಳು ದೊರಕಲು ಗಮನಹರಿಸಿ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮಗಳಡಿ ವಿಕಲಚೇತನರಿಗೆ ನೀಡಲಾಗಿರುವ ಸೌಲಭ್ಯಗಳ ಅನುಷ್ಠಾನದ ಬಗ್ಗೆ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಗವಿಕಲರ ಮೇಲಿನ ಅನುಕಂಪದಿಂದ ಹೊರಬಂದರೆ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ಕ್ರಿಯಾಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬದುಕಿನಲ್ಲಿ ಚೇತನ ತುಂಬುವ ಕಾರ್ಯವನ್ನು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಸಹಾಯದಿಂದ ಮಾಡಲಾಗುತ್ತಿದೆ ಎಂದರು.

ADVERTISEMENT

ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್‌ರಾಜ್ ಇಲಾಖೆ ಹಾಗೂ ಸ್ಥಳೀಯ ಮತ್ತು ನಗರಸಭೆ ಪ್ರತಿನಿಧಿಗಳು ಸೇರಿದಂತೆ ಮತ್ತಿತರ ಇಲಾಖೆಗಳು ಒಟ್ಟು ಬಜೆಟ್‌ನ ಖರ್ಚಿನಲ್ಲಿ ಶೇಕಡ 5 ರಷ್ಟು ಹಣವನ್ನು ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಅಂಗವಿಕಲರ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಅಂಗವಿಕಲರಿಗೆ ಸಾಮಾನ್ಯ ಸೌಲಭ್ಯಗಳಾದ ಫಿಸಿಯೋಥೆರಪಿ, ಮೂರು ಚಕ್ರದ ಮೋಟಾರ್ ವಾಹನ, ಬೈಸಿಕಲ್, ಪಿಂಚಣಿ ಜೊತೆಗೆ ಮೂಲ ಸೌಕರ್ಯಗಳಾದ ಪ್ರತ್ಯೇಕ ಶೌಚಾಲಯ, ಪ್ರತ್ಯೇಕ ಉದ್ಯಾನವನ, ಕೌಶಲ ತರಬೇತಿ, ಕ್ರೀಡಾ ಚಟುವಟಿಕೆ ಹಾಗೂ ಬಹುಮುಖ್ಯವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬುದ್ಧಿಮಾಂದ್ಯ, ಮಾನಸಿಕ ದೌರ್ಜನ್ಯಕ್ಕೊಳಾಗದ ಮಹಿಳೆಯರು ಮತ್ತು ಮಕ್ಕಳಿಗೆ ಸರಿಯಾದ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿಗಳ ಬಳಿ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ನಡೆಸಿ, ಪೋಷಕರು ಮತ್ತು ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ರಮ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪುಷ್ಪ ರಾಯ್ಕರ್, ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಂಗವಿಕಲ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.