ADVERTISEMENT

ಚುನಾವಣೆ: ಅಧಿಕಾರಿ,ಸಿಬ್ಬಂದಿಗೆ ರಜೆ ಇಲ್ಲ: ಡಿ.ಸಿ

ಚುನಾವಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 16 ಕಡೆ ಚೆಕ್‌ಪೋಸ್ಟ್ ಆರಂಭ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 13:50 IST
Last Updated 11 ಮಾರ್ಚ್ 2019, 13:50 IST
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿದರು   

ದೇವನಹಳ್ಳಿ : ಮಾ.10ರಿಂದ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ತಕ್ಷಣದಿಂದ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 16 ಚೆಕ್ ಪೋಸ್ಟ್ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಜಿಲ್ಲೆಯ ನಾಲ್ಕು ವಿಧಾಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,12,902 ಮತದಾರರಿದ್ದಾರೆ. 1,030 ಮತಗಟ್ಟೆ ಸ್ಥಾಪಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. 27 ಜಾಗೃತಿ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಚೆಕ್ ಪೋಸ್ಟ್‌ಗಳಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡಲು ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

5 ಸಂಚಾರ ವಿಡಿಯೊ ಚಿತ್ರೀಕರಣ ತಂಡ, 9 ವಿಡಿಯೊ ಸರ್ವೆಲೆನ್ಸ್‌ ತಂಡ, 101 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ನಾಲ್ಕು ತಾಲ್ಲೂಕಿನಲ್ಲಿ ನಾಲ್ಕು ಪಿಂಕ್ ಮಾಡಲ್ ಪೋಲಿಂಗ್ ಸೆಂಟರ್ ತೆರೆಯಲಾಗುತ್ತಿದೆ ಎಂದರು.

ADVERTISEMENT

ಅಂಗವಿಕಲರಿಗೆ ಈ ಬಾರಿ ಮತದಾನ ಮಾಡಲು 580 ವಿಶೇಷ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಮಾ.16ರಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿ ಶೇ100 ರಷ್ಟು ಪ್ರಗತಿಯಾಗಿದೆ. ವಿಜಯಪುರ ಟೌನ್‌ನಲ್ಲಿ ಫ್ಲೆಕ್ಸ್ ಹಾಕಿರುವ ಬಗ್ಗೆ ಒಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಸಂಪೂರ್ಣವಾಗಿ ಸಿದ್ಧವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಲ್ಲಿನ ಜಿಲ್ಲಾಧಿಕಾರಿ ರಿಟರ್ನಿಂಗ್ ಅಧಿಕಾರಿಯಾಗಿದ್ದಾರೆ. ಜಿಲ್ಲೆಯಲ್ಲಿ 250 ಅತಿಸೂಕ್ಷ್ಮ ಮತಗಟ್ಟೆಯನ್ನು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ನೀತಿ ಸಂಹಿತೆ ಮೀರಿ ಪೋಸ್ಟ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ರಜೆ ಇರುವುದಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಮಾಡುವಂತಿಲ್ಲ. ಇದು ಚುನಾವಣಾ ಆಯುಕ್ತರ ಆದೇಶ. ಇದನ್ನು ಪಾಲಿಸದಿದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1950ಗೆ ಸಾರ್ವಜನಿಕರು ಸಂಪರ್ಕಿಸಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.