ADVERTISEMENT

ಬೇಸಿಗೆಯಲ್ಲಿ ಸಸಿ ನೆಡುವಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 12:29 IST
Last Updated 5 ಜನವರಿ 2019, 12:29 IST
ವಿಜಯಪುರದ ಚನ್ನರಾಯಪಟ್ಟಣ ರಸ್ತೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಡಲು ತೋಡಿರುವ ಗುಂಡಿಗಳು
ವಿಜಯಪುರದ ಚನ್ನರಾಯಪಟ್ಟಣ ರಸ್ತೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಡಲು ತೋಡಿರುವ ಗುಂಡಿಗಳು   

ವಿಜಯಪುರ: ಚನ್ನರಾಯಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೇಸಿಗೆಯಲ್ಲಿ ಸಸಿಗಳನ್ನು ನೆಡುವ ಮೂಲಕ ವೃಥಾ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ರೈತ ಮುಖಂಡ ರಮೇಶ್ ಆರೋಪಿಸಿದರು.

‘ಮೂರು ವರ್ಷಗಳಿಂದ ನಿರಂತರವಾಗಿ ಸಸಿ ನೆಡುವ ಕೆಲಸ ಮಾಡುತ್ತಿದ್ದಾರೆ. ಒಂದೆರಡು ಟ್ಯಾಂಕರ್‌ ನೀರು ಹಾಕುತ್ತಾರೆ. ಗಿಡಗಳ ಸುತ್ತಲೂ ಬೇಲಿ ಹಾಕುವುದಿಲ್ಲ. ಗಿಡಗಳ ಸಂರಕ್ಷಣೆಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಒಂದು ತಿಂಗಳು ಕಳೆದರೆ ಬೇಸಿಗೆ ಆರಂಭವಾಗುತ್ತಿದೆ. ಬಿಸಿಲಿನಿಂದ ಸಸಿಗಳು ಒಣಗುತ್ತವೆ’ ಎಂದರು.

‘ರಸ್ತೆಯ ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್ ಲೈನ್‌ಗಳ ಕೆಳಗೆ ನಾಟಿ ಮಾಡಲು ಮುಂದಾಗುತ್ತಿದ್ದಾರೆ. ಒಂದು ವೇಳೆ ಸಸಿಗಳು ಬೆಳೆದರೂ ವಿದ್ಯುತ್ ತಂತಿಗಳು ಅಡ್ಡಿಯಾಗುವುದರಿಂದ ಬೆಸ್ಕಾಂನವರು ಮರಗಳನ್ನು ಕಡಿದು ಹಾಕುತ್ತಾರೆ. ಇದರಿಂದ ಯಾವುದೇ ಪ್ರಯೋಜನವಾಗದಿದ್ದರೂ ಜೆಸಿಬಿಗಳನ್ನು ತಂದು ಗುಂಡಿ ತೆಗೆಸಿ ಸಸಿಗಳನ್ನು ನೆಟ್ಟು ಬಿಲ್‌ ಮಾಡಿಕೊಳ್ಳುತ್ತಾರೆ. ಮರಗಳನ್ನು ಬೆಳೆಸುವುದು ಅವರ ಮೂಲ ಉದ್ದೇಶವಲ್ಲ’ ಎಂದು ದೂರಿದರು.

ADVERTISEMENT

ಸೋಮಶೇಖರ್, ಮುನಿರಾಜು, ಹರೀಶ್, ಸಂತೋಷ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.