ADVERTISEMENT

ದೂರದೃಷ್ಟಿ ಆಡಳಿತದಿಂದ ಜನಪರ ಆಡಳಿತ

ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:38 IST
Last Updated 1 ಸೆಪ್ಟೆಂಬರ್ 2019, 16:38 IST
ವಿಜಯಪುರದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿದರು
ವಿಜಯಪುರದಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿದರು   

ವಿಜಯಪುರ: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಲ್ಲಿದ್ದ ದೂರದೃಷ್ಟಿಯ ಫಲವಾಗಿ ಇಂದು ಆಡಳಿತ ನಡೆಸುತ್ತಿರುವ ಸರ್ಕಾರಗಳು ಜನಪರವಾದ ಯೋಜನೆ ಕೈಗೊಳ್ಳಲಿಕ್ಕೆ ಸಾಧ್ಯವಾಗುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ. ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿ ಚೌಕದಲ್ಲಿರುವ ಕಸಾಪ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಡೆಯರ್ ಅವರ ಆಳ್ವಿಕೆಯಲ್ಲಿ ಕೈಗೊಂಡಿರುವ ಯೋಜನೆಗಳಾದ ಹೊಸ ಅರಮನೆ ನಿರ್ಮಾಣ, ಕೆರೆಗಳ ನಿರ್ಮಾಣ, ಜಲಾಶಯಗಳ ನಿರ್ಮಾಣ, ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ, ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣ, ಬೆಂಗಳೂರಿನ ಕೆ.ಆರ್.ಆಸ್ಪತ್ರೆ ನಿರ್ಮಾಣ, ಚಾಮರಾಜ ತಾಂತ್ರಿಕ ವಿದ್ಯಾಲಯ, ಕೃಷ್ಣಾಜಮ್ಮಣ್ಣಿ ಕ್ಷಯರೋಗ ಆಸ್ಪತ್ರೆ, ಭದ್ರಾವತಿ ಪೇಪರ್ ಮಿಲ್ ಸೇರಿದಂತೆ ಅನೇಕ ದೂರದೃಷ್ಟಿಯ ಜನಪ್ರಿಯ ಕಾರ್ಯಕ್ರಮಗಳು ಇಂದಿಗೂ ಜನರ ಮನಸ್ಸಿನಲ್ಲಿವೆ ಎಂದರು.

ADVERTISEMENT

1921 ರಲ್ಲಿ ಪ್ರಥಮ ಬಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಶೇ 75 ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದ್ದರು. ಈ ಕಾರಣದಿಂದಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೀಸಲಾತಿಯ ಜನಕ ಎಂದು ಕರೆಯುತ್ತಾರೆ. ಇಂತಹ ಜನನಾಯಕನನ್ನು ಎಂದಿಗೂ ಮರೆಯಬಾರದು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟವರು ಒಡೆಯರ್’ ಎಂದರು.

‘ಅವರ ಅವಧಿಯಲ್ಲಿ ರಾಜ್ಯದಲ್ಲಿ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದ್ದರಿಂದ ಗ್ರಾಮೀಣ ಪ್ರದೇಶದ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಿದ್ದರಿಂದ ಸಾಮಾನ್ಯ ಜನರೂ ಕೂಡಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಾಗಿದೆ’ ಎಂದರು.

‘ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಿದರು. ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದ್ದವು’ ಎಂದರು.

ಮುಖಂಡ ಸೂರ್ಯಪ್ರಕಾಶ್ ಮಾತನಾಡಿ, ‘ಅವರ ಅವಧಿಯಲ್ಲಿ ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ ರದ್ಧತಿ, ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, ವಿಧವೆಯರು ಮರು ವಿವಾಹ ಮಾಡಿಕೊಳ್ಳುವ ಕಾಯ್ದೆ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ, ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ, ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟ ಮೊದಲ ಬಾರಿಗೆ ಕಲ್ಪಿಸಿಕೊಟ್ಟರು’ ಎಂದರು.

‘ಗ್ರಾಮ ಪಂಚಾಯಿತಿಗಳ ಕಾಯ್ದೆಯನ್ನು ಜಾರಿಗೆ ತಂದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಇಂತಹ ನಾಯಕರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿರುವ ಅನಿವಾರ್ಯತೆ ಇದೆ’ ಎಂದರು.

ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ಜಿಲ್ಲಾ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಶಿವಣ್ಣ, ವಿಶ್ವನಾಥ್, ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.