ADVERTISEMENT

ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ: 85 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ ವಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 12:55 IST
Last Updated 11 ಫೆಬ್ರುವರಿ 2020, 12:55 IST
ವಿಜಯಪುರದಲ್ಲಿ ವೆಂಕಟರಮಣಸ್ವಾಮಿ ದೇವಾಲಯದ ರಸ್ತೆಯಲ್ಲಿ ಪುರಸಭೆಯ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ಕವರುಗಳನ್ನು ವಶಪಡಿಸಿಕೊಂಡರು
ವಿಜಯಪುರದಲ್ಲಿ ವೆಂಕಟರಮಣಸ್ವಾಮಿ ದೇವಾಲಯದ ರಸ್ತೆಯಲ್ಲಿ ಪುರಸಭೆಯ ಅಧಿಕಾರಿಗಳು ದಾಳಿ ನಡೆಸಿ ಪ್ಲಾಸ್ಟಿಕ್ ಕವರುಗಳನ್ನು ವಶಪಡಿಸಿಕೊಂಡರು   

ವಿಜಯಪುರ: ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಇಲ್ಲಿನ ಪುರಸಭೆಯ ಅಧಿಕಾರಿಗಳು ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಕವರುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಗಾಂಧಿಚೌಕ, ವೆಂಕಟರಮಣಸ್ವಾಮಿ ದೇವಾಲಯದ ರಸ್ತೆ, ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ ಪುರಸಭೆಯ ಅಧಿಕಾರಿಗಳು, ಬೇಕರಿ, ಕಿರಾಣಿ ಅಂಗಡಿ, ಬಟ್ಟೆ ವ್ಯಾಪಾರದ ಅಂಗಡಿ ಹಾಗೂ ವಿವಿಧ ವ್ಯಾಪಾರದ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಗಳಲ್ಲಿ ಸಂಗ್ರಹಿಸಿಕೊಂಡಿದ್ದ 85 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.

ಇನ್ನು ಮುಂದೆ ಅಂಗಡಿಗಳಿಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ, ಅಂಗಡಿಗಳ ವ್ಯಾಪಾರ ಪರವಾನಗಿ ರದ್ದುಪಡಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ ಮಾತನಾಡಿ, ‘ಮರುಬಳಕೆಯಾಗದ ಪ್ಲಾಸ್ಟಿಕ್ ಭೂಮಿಯಲ್ಲಿ ಕರಗುವುದಿಲ್ಲ. ಅದನ್ನು ಸುಟ್ಟರೆ ಮಾಲಿನ್ಯ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕ್ಯಾನ್ಸರ್‌ಕಾರವಾಗಿರುವ ಕಾರಣ ಜನರು ಎಚ್ಚೆತ್ತುಕೊಳ್ಳಬೇಕು. ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡುವುದರ ಬದಲಿಗೆ ಬಟ್ಟೆ ಬ್ಯಾಗ್ ಬಳಕೆ ಮಾಡಿಕೊಳ್ಳಿ’ ಎಂದರು.

ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ‘ಪ್ಲಾಸ್ಟಿಕ್ ವಸ್ತುಗಳ ನಿರ್ವಹಣೆ ಮತ್ತು ನಿಬಂಧನೆ ನಿಯಮ 2016ರ ಕಾಯ್ದೆಯಡಿ ಪ್ಲಾಸ್ಟಿಕ್ ಕೈಚೀಲಗಳನ್ನು ನಿಷೇಧಿಸಿದ್ದರೂ ಕೆಲವು ಅಂಗಡಿಗಳ ಮಾಲೀಕರು ಎಗ್ಗಿಲ್ಲದೇ ಪ್ಲಾಸ್ಟಿಕ್ ಕವರುಗಳನ್ನು ಮಾರಾಟ ಮಾಡುವುದು, ಗ್ರಾಹಕರಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲು ನೀಡುತ್ತಿದ್ದರು. ಆದ್ದರಿಂದ ಇಂದು ದಾಳಿ ನಡೆಸಿ ಕವರ್‌ ವಶಪಡಿಸಿಕೊಂಡಿದ್ದೇವೆ’ ಎಂದರು.
ಎಂಜಿನಿಯರ್ ಗಂಗಾಧರ್ ಮಾತನಾಡಿ, ‘ಇಲ್ಲಿನ ಅಂಗಡಿಗಳ ಮಾಲೀಕರಿಗೆ ಹಲವಾರು ಬಾರಿ ತಿಳಿವಳಿಕೆ ನೀಡಿ, ಈ ಹಿಂದೆ ಮೂರ್ನಾಲ್ಕು ಬಾರಿ ದಾಳಿ ನಡೆಸಿದ್ದರೂ ಕೂಡ ಮತ್ತೆ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಮುಂದೆ ಇಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸಿ ಕೇಸು ದಾಖಲಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ ಸಾರ್ವಜನಿಕರು ಕೂಡಾ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಸಾಮಾನುಗಳನ್ನು ತೆಗೆದುಕೊಂಡು ಹೋದಲ್ಲಿ ಅಂತಹವರ ವಿರುದ್ಧವೂ ಕೇಸು ದಾಖಲು ಮಾಡಲಾಗುವುದು. ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ತಿಳಿವಳಿಕೆ ಹೊಂದಬೇಕು’ ಎಂದರು.

ಉತ್ಪಾದನೆ ನಿಲ್ಲಿಸುವಂತೆ ಒತ್ತಾಯ: ನಾವು ಲಕ್ಷಾಂತರ ರೂಪಾಯಿಗಳು ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದೇವೆ. ಗ್ರಾಹಕರು ಬರಿಗೈಲಿ ಬಂದು ಖರೀದಿ ಮಾಡುತ್ತಾರೆ. ಕವರು ಕೊಡದಿದ್ದರೆ ಅವರು ವ್ಯಾಪಾರ ಮಾಡುವುದಿಲ್ಲ. ಗ್ರಾಹಕರು ವಾಪಸ್‌ ಹೋಗುತ್ತಾರೆ. ನೀವು ಪ್ಲಾಸ್ಟಿಕ್ ಕವರ್‌ ಉತ್ಪಾದನೆ ನಿಲ್ಲಿಸಲು ಸರ್ಕಾರಕ್ಕೆ ವರದಿ ಕೊಡಿ. ನಾವೂ ಮಾರಾಟ ನಿಲ್ಲಿಸುತ್ತೇವೆ ಎಂದು ಕೆಲ ವರ್ತಕರು ಅಧಿಕಾರಿಗಳನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.