ADVERTISEMENT

‘ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 11:14 IST
Last Updated 14 ಆಗಸ್ಟ್ 2019, 11:14 IST
ವಿಜಯಪುರದ ಗುರಪ್ಪನಮಠದ ರಸ್ತೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಮಳೆ ನೀರು ಸಂಗ್ರಹ ಟ್ಯಾಂಕ್ ಕಾಮಗಾರಿಯನ್ನು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ವೀಕ್ಷಿಸಿದರು
ವಿಜಯಪುರದ ಗುರಪ್ಪನಮಠದ ರಸ್ತೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಮಳೆ ನೀರು ಸಂಗ್ರಹ ಟ್ಯಾಂಕ್ ಕಾಮಗಾರಿಯನ್ನು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ವೀಕ್ಷಿಸಿದರು   

ವಿಜಯಪುರ: ‘ತೀವ್ರ ಮಳೆಯ ಕೊರತೆ ಎದುರಿಸುತ್ತಿರುವ ನಾವು ಮಳೆಯ ನೀರಿನ ಸಂಗ್ರಹದ ಕಡೆಗೆ ಗಮನ ಹರಿಸಬೇಕಾಗಿದೆ' ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಹೇಳಿದರು.

ಇಲ್ಲಿನ ಗುರಪ್ಪನಮಠದ ರಸ್ತೆಯಲ್ಲಿನ ಉದ್ಯಾನದಲ್ಲಿ ನಿರ್ಮಾಣದ ಹಂತದಲ್ಲಿರುವ ನೀರು ಸಂಗ್ರಹ ತೊಟ್ಟಿಯ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

‘ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿದ್ದೇವೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆ ಕಡಿಮೆ ಇದೆ. ಆರ್.ಸಿ.ಸಿ. ಮೇಲ್ಚಾವಣಿಗಳನ್ನು ಹೊಂದಿರುವ ಜನರು ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡರೆ ನೀರಿನ ಅಭಾವವನ್ನು ಕೊಂಚ ಮಟ್ಟಿಗೆ ನೀಗಿಸಬಹುದಾಗಿದೆ’ ಎಂದರು.

ADVERTISEMENT

‘ಆದ್ದರಿಂದ ಲಭ್ಯವಿರುವ ನೀರನ್ನು ಮಿತವಾಗಿ ಬಳಸಿ, ಮಳೆಯ ನೀರಿನ ಸಂಗ್ರಹಕ್ಕೆ ಮುಂದಾಗಬೇಕು. ಈಗಾಗಲೇ ಪುರಸಭಾ ಕಚೇರಿಗೆ ಸಂಬಂಧಿಸಿದ ಕಟ್ಟಡಗಳಿಂದ ನೀರು ಸಂಗ್ರಹಿಸಲಾಗುತ್ತಿದೆ’ ಎಂದರು.

ಮಳೆಯ ನೀರನ್ನು ಸಂಗ್ರಹಿಸಿ ಉದ್ಯಾನದ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದ್ದು, ಸಮೀಪದಲ್ಲೇ ಸಾಮೂಹಿಕ ಶೌಚಾಲಯ ನಿರ್ಮಿಸಿ ಅದರ ನಿರ್ವಹಣೆಗೂ ಈ ನೀರನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದರು.

ಪರಿಸರ ಎಂಜಿನಿಯರ್ ಮಹೇಶ್‌ಕುಮಾರ್ ಮಾತನಾಡಿ, ‘ನಾವು ವಾಸಮಾಡುವ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜತೆಗೆ, ಮಳೆಯ ನೀರು ಎಲ್ಲಿಯೂ ನಿಲ್ಲದಂತೆ ನೋಡಿಕೊಂಡು ಮುಂದೆ ಬರಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜನರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು’ ಎಂದರು.

‘ಆಗ ಮಾತ್ರ ನಾವು ಉತ್ತಮ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನೀರಿನಂತಹ ಸಂಪನ್ಮೂಲ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎಂದರು. ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಮುಖಂಡ ಖಲಂದರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.