ADVERTISEMENT

ಯುವ ದಿನಾಚರಣೆಗೆ ಸಿದ್ಧತೆ

ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 3:24 IST
Last Updated 7 ಜನವರಿ 2021, 3:24 IST
ಯುವ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿದರು
ಯುವ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿದರು   

ದೇವನಹಳ್ಳಿ: ಕೋವಿಡ್‌ ಮಾರ್ಗಸೂಚಿ ಅನ್ವಯ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ನಡೆಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜ. 12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳೆದ ವರ್ಷ ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆಸಲಾಗಿತ್ತು ಎಂದರು.

ADVERTISEMENT

ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿ ವಿಜೇತ ವಿದ್ಯಾರ್ಥಿಗಳನ್ನು ಆಯಾ ತಾಲ್ಲೂಕಿನಲ್ಲಿ ಪ್ರಶಸ್ತಿ ಪತ್ರಗಳನ್ನು ನೀಡುವ ಮೂಲಕ ಗೌರವಿಸಬೇಕು. ವಿಜೇತರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಬೇಕು ಎಂದರು.

ತಾಲ್ಲೂಕುವಾರು ಒಬ್ಬ ಶಿಕ್ಷಕರನ್ನು ನೇಮಿಸಬೇಕು. ಆ ಶಿಕ್ಷಕರು, ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮೊದಲೇ ಕೋವಿಡ್ ಪರೀಕ್ಷೆ ಮಾಡಿಸಿರಬೇಕು. ಶಿಕ್ಷಕರು ಈ ನಿಯಮ ಪಾಲಿಸಬೇಕು ಎಂದರು.

ಕೋವಿಡ್ ನಿಯಮಗಳನ್ನು ಪಾಲಿಸಬೇಕಾದ್ದರಿಂದ ಕ್ರೀಡಾ ಕಿಟ್‍ಗಳನ್ನು ವಿತರಿಸುವಾಗ ಸಾಂಕೇತಿಕವಾಗಿ ವೇದಿಕೆ ಮೇಲೆ ಐದರಿಂದ ಹತ್ತು ಜನರಿಗೆ ಮಾತ್ರ ನೀಡಬೇಕು. ಕಾರ್ಯಕ್ರಮದ ನಂತರ ಉಳಿದವರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಲು ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು. ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗೆ ತಿಳಿಸಿದರು.

ಶಾಲಾ, ಕಾಲೇಜುಗಳು, ಪದವಿ ಹಂತದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟಕೊಂಡು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇವೆ ಸಲ್ಲಿಸಿರುವ ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ಕೆ. ನಾಯ್ಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್. ಗೀತಾ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ನಾಗರಾಜು, ಜಿಲ್ಲೆಯ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಎನ್.ಎಸ್.ಎಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.