ADVERTISEMENT

ನೆರೆಪೀಡಿತ ಪ್ರದೇಶದ ರಸ್ತೆ ಅಭಿವೃದ್ದಿಗೆ ಆದ್ಯತೆ: ಸಚಿವ ಗೋವಿಂದ ಎಂ.ಕಾರಜೋಳ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:00 IST
Last Updated 8 ನವೆಂಬರ್ 2019, 20:00 IST
ಸಮೃದ್ಧಿ ಯೋಜನೆಯ ಫಲಾನುಭವಿ ನಂದಿನಿ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಆದೇಶ ಪತ್ರ ನೀಡಿದರು
ಸಮೃದ್ಧಿ ಯೋಜನೆಯ ಫಲಾನುಭವಿ ನಂದಿನಿ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಆದೇಶ ಪತ್ರ ನೀಡಿದರು   

ದೊಡ್ಡಬಳ್ಳಾಪುರ: ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ 21 ಸಾವಿರ ಕಿ.ಮೀ ರಸ್ತೆ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಇತರೆ ಜಿಲ್ಲೆಗಳಲ್ಲಿನ ಲೋಕೋಪಯೋಗಿ ರಸ್ತೆ ಕಾಮಗಾರಿಗಳನ್ನು ತಡೆಹಿಡಿದು ನೆರೆ ಪೀಡಿತ ಪ್ರದೇಶಕ್ಕೆ ಪ್ರಥಮ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ಅವರು ಶುಕ್ರವಾರ ನಗರದ ಪಾಲನಗೋಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ, ಪಂಗಡದವರಿಗಾಗಿ ಸಮೃದ್ಧಿ ಯೋಜನೆಯಲ್ಲಿ ₹10 ಲಕ್ಷ ವೆಚ್ಚದಲ್ಲಿ ಆರಂಭಿಸಿರುವ ವಾಹನಗಳ ಟೈರ್‌ಗಳ ಡೀಲರ್‌ ಶಿಪ್‌ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ನೆರೆಪೀಡಿತ ಪ್ರದೇಶಗಳಲ್ಲಿ ಮೊದಲ ಕಂತಿನಲ್ಲಿ ₹10 ಸಾವಿರ ಪರಿಹಾರ ನೀಡಲಾಗಿದೆ. ಮನೆ ನಿರ್ಮಿಸಿಕೊಳ್ಳಲು ಮೊದಲ ಹಂತದಲ್ಲಿ ₹1 ಲಕ್ಷ ನೀಡಲಾಗಿದ್ದು, ಉಳಿದ ₹4 ಲಕ್ಷವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ರೈತರ ಬೆಳೆ ನಷ್ಟಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ₹10 ಸಾವಿರ ಹಾಗೂ ಎನ್‌ಡಿಆರ್‌ಎಫ್‌ ನಿಧಿಯ ನಿಯಮದಂತೆಯೂ ಹೆಚ್ಚುವರಿ ಪರಿಹಾರವನ್ನು ನೀಡಲಾಗುವುದು ಎಂದು

ADVERTISEMENT

ದಲಿತರಿಗೆ ಕುರಿ,ಕೋಳಿ ಕೊಡುವುದಕಿಂತಲು ಅವರನ್ನು ಸಹ ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶದಿಂದ ಕೆಸಿಎಫ್‌ಸಿ, ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ ₹10 ಕೋಟಿ ವರೆಗೂ ಆರ್ಥಿಕ ನೆರವು ಪಡೆಯಲು ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಅರ್ಹ ಫಲಾನುಭವಿಗಳಿಗೆ ನಿಗಮದಿಂದ ಮಂಜೂರಾತಿ ನೀಡಿದರು ಸಹ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಲು ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸದ್ಯದಲ್ಲೇ ಬ್ಯಾಂಕರ್‌ಗಳ ಸಭೆಯನ್ನು ಕರೆದು ಸೂಚನೆ ನೀಡಲಾಗುವುದು. ಸಮೃದ್ಧಿ ಯೋಜನೆಯಲ್ಲಿ ₹175 ಕೋಟಿ ಅನುದಾನದಲ್ಲಿ 233 ಫಲಾನುಭವಿಗಳಿಗೆ ತಲಾ ₹10 ಲಕ್ಷ ನೀಡಲಾಗಿದೆ ಎಂದರು.

ಹಾಸ್ಟೆಲ್‍ಗಳಿಗೆ ಮೂಲ ಸೌಕರ್ಯ: ಹಾಸ್ಟೆಲ್‍ಗಳಲ್ಲಿ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದ್ದು, ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಹೆಚ್ಚುವರಿ ಕೊಠಡಿಗಳಿಗಾಗಿ ₹140 ಕೋಟಿ ಯೋಜನೆ ಸಿದ್ದಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೈಗಾರಿಕಾ ಮತ್ತು ತರಬೇತಿ ರಾಜ್ಯ ಪ್ರಧಾನ ವ್ಯವಸ್ಥಾಪಕ ಅರುಣ್‌ಕುಮಾರ್, ಬೆಂಗಳೂರು ವಿಭಾಗದ ವ್ಯವಸ್ಥಾಪಕ ಪದ್ಮನಾಭ್, ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್, ಜಿಲ್ಲಾ ವ್ಯವಸ್ಥಾಪಕರಾದ ಕಾಮಾಕ್ಷಮ್ಮ, ಸಮೃದ್ದಿ ಯೋಜನೆಯ ಫಲಾನುಭವಿ ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.