ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ: ಸಂಸದ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 13:11 IST
Last Updated 16 ಸೆಪ್ಟೆಂಬರ್ 2020, 13:11 IST
ಹೊಸಕೋಟೆ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ಎನ್. ಬಚ್ಚೇಗೌಡ ಚಾಲನೆ ನೀಡಿದರು. ಜೊತೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.
ಹೊಸಕೋಟೆ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಬಿ.ಎನ್. ಬಚ್ಚೇಗೌಡ ಚಾಲನೆ ನೀಡಿದರು. ಜೊತೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.   

ಹೊಸಕೋಟೆ: ‘ದೇಶದ ಪ್ರಗತಿಯಲ್ಲಿ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.

ತಾಲ್ಲೂಕಿನ ಭಕ್ತರಹಳ್ಳಿ ಮತ್ತು ಕೊಳತೂರು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಗ್ರಾಮೀಣ ಭಾಗಗಳ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಾಲ್ಲೂಕಿನ 5 ಗ್ರಾಮಗಳನ್ನು ಆಯ್ಕೆಮಾಡಿಕೊಂಡಿದ್ದು ಪ್ರತಿ ಗ್ರಾಮಕ್ಕೆ ತಲಾ ₹ 50 ಲಕ್ಷ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತದೆ’ ಎಂದರು.

ADVERTISEMENT

‘ಈಗ ರಾಷ್ಟ್ರೀಯ ಹೆದ್ದಾರಿ 207ರಿಂದ ಭಕ್ತರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಹಾಗೂ ಕೊಳತೂರು ಗ್ರಾಮದಿಂದ ರಾಷ್ಠೀಯ ಹೆದ್ದಾರಿ 75ಕ್ಕೆ ಸಂಪರ್ಕಿಸುವ ರಸ್ತೆಗೆ ₹ 30 ಲಕ್ಷ ವೆಚ್ಚದಲ್ಲಿ ಡಾಂಬರೀಕರಣಕ್ಕೆ ಭೂಮಿ ಪೂಜೆ ಮಾಡಲಾಗಿದೆ’ ಎಂದರು.
ಶಾಸಕ ಶರತ್ ಬಚ್ಚೇಗೌಡಮಾತನಾಡಿ, ‘ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ’ ಎಂದರು.

‘ಕೊಳತೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಅದಕ್ಕಾಗಿ ಬೋರ್‌ವೆಲ್‌ ಕೊರೆಸಿ ನೀರಿನ ಸಂಪರ್ಕ ನೀಡಲಾಗಿದೆ. ಗ್ರಾಮದ ರುದ್ರಭೂಮಿಯ ರಸ್ತೆಯನ್ನೂ ಸಹ ಮರುನಿರ್ಮಾಣ ಮಾಡಲಾಗುತ್ತದೆ’ ಎಂದರು.

ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹುಲ್ಲೂರು ಮಂಜುನಾಥ್, ಜಡಿಗೇನಹಳ್ಳಿ ಎಸ್.ಎಫ್.ಸಿ.ಎಸ್. ನಿದೇಶಕ ಕೋಡಿಹಳ್ಳಿ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ಮುಖಂಡರಾದ ರಾಜಶೇಖರ ಗೌಡ, ಕೃಷ್ಣಪ್ಪ, ಹನುಮಂತೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.