ADVERTISEMENT

ರೈತರಿಗೆ ನ್ಯಾಯ ಒದಗಿಸುವ ಭರವಸೆ

ಕೋರ್ಟ್‌ ಸಂಕೀರ್ಣ ನಿರ್ಮಾಣ ಸ್ಥಳಕ್ಕೆ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 4:02 IST
Last Updated 22 ಜುಲೈ 2021, 4:02 IST
ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂ. 134ರಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ತ್ಯಾಗರಾಜ್‌ ಎನ್. ಇನ್ನವಳಿ ಮತ್ತು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು
ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂ. 134ರಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ತ್ಯಾಗರಾಜ್‌ ಎನ್. ಇನ್ನವಳಿ ಮತ್ತು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು   

ದೇವನಹಳ್ಳಿ:ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂಬರ್ 134ರಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಿಸಬೇಕು. ಆ ಜಾಗದಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ತ್ಯಾಗರಾಜ್‌ ಎನ್. ಇನ್ನವಳಿ ಭರವಸೆ ನೀಡಿದರು.

ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಈ ಜಾಗದಲ್ಲಿ 100 ಎಕರೆಯಷ್ಟು ಸರ್ಕಾರಿ ಗೋಮಾಳ ಇದೆ. ಈಗಾಗಲೇ ರೈತರು ಸಂಬಂಧಪಟ್ಟ ದಾಖಲೆ ಇಟ್ಟುಕೊಂಡಿದ್ದು, ಜಾಗಕ್ಕೆ ಸಂಬಂಧಿಸಿದಂತೆ ಉಳುಮೆ ಮಾಡುವ ರೈತರು ತಮ್ಮಲ್ಲಿರುವ ದಾಖಲೆಗಳನ್ನು ತಹಶೀಲ್ದಾರ್ ನಿಯೋಜಿಸುವ ಅಧಿಕಾರಿಗಳಿಗೆ ಸಲ್ಲಿಸಬೇಕು. ಮುಂದಿನ ಮೂರ‍್ನಾಲ್ಕು ದಿನದಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿ, ಈಗಾಗಲೇ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಮಂಜೂರು ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಆಕಾರ ಬಂದ್‌ ಪ್ರಕಾರ 104 ಎಕರೆ, ಆರ್‌ಟಿಸಿ ಪ್ರಕಾರ 190 ಎಕರೆ ಇದೆ. ಓವರ್‌ಲ್ಯಾಪ್ ಡುಬ್ಲಿಕೇಟ್ ಆರ್‌ಟಿಸಿ ಇರುತ್ತದೆ. ಅದ್ದರಿಂದ ಸರ್ವೆ ನಡೆಸಿ ನಕ್ಷೆ ತಯಾರು ಮಾಡಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ರೈತರು ಯಾವ ಯಾವ ಜಾಗದಲ್ಲಿದ್ದಾರೆ. ಸರ್ವೆ ಕಾರ್ಯ ನಡೆಯುವ ಸಂದರ್ಭದಲ್ಲಿ ರೈತರಿಗೆ ಅವರವರ ಜಾಗ ಯಾವ್ಯಾವ ಬ್ಲಾಕ್‌ನಲ್ಲಿರುತ್ತದೆ ಎಂಬುದು ತಿಳಿಯುತ್ತದೆ ಎಂದರು.

ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ. ಸೂಕ್ತ ದಾಖಲೆಗಳಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ದಾಖಲೆ ಪರಿಶೀಲಿಸಿ ಅದಲು ಬದಲಾಗಿರುವ ಸ್ಥಳವನ್ನು ಸರ್ವೆ ನಕಾಶೆಯಲ್ಲಿ ಗುರ್ತಿಸಿ ಕೊಡಲಾಗುತ್ತದೆ. ಇದರಿಂದ ನಿಮ್ಮ ಸಮಸ್ಯೆ ಮತ್ತು ನಮ್ಮ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಹೇಳಿದರು.

ಹೆಚ್ಚುವರಿ ಜಾಗವಿರುವವರು ಹಾಗೂ ದಾಖಲೆಗಳೇ ಇಲ್ಲದೆ, ಅಕ್ರಮವಾಗಿ ಪ್ರವೇಶ ಮಾಡಿರುವವರನ್ನು ಸ್ಥಳದಿಂದ ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಿದರು.

ದೇವನಹಳ್ಳಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಜೆ. ರಮೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಭೂ ದಾಖಲೆಗಳಉಪ ನಿರ್ದೇಶಕ ಹನುಮೇಗೌಡ, ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ಉಪಾಧ್ಯಕ್ಷ ಜಯರಾಮಯ್ಯ, ಕಾರ್ಯದರ್ಶಿ ಆನಂದ್, ಖಜಾಂಚಿ ವೆಂಕಟೇಶ್, ಆರ್‌.ಐ. ವಿಶ್ವನಾಥ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಎಸ್‌.ಎಲ್‌.ಎಸ್ ಶಾಲೆಯ ಧನಂಜಯ್, ರೈತರಾದ ಮಂಜುನಾಥ್, ಕಮಲಮ್ಮ, ವಿನೋದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.