ADVERTISEMENT

ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 5:59 IST
Last Updated 10 ಡಿಸೆಂಬರ್ 2020, 5:59 IST
ಪ್ರತಿಭಟನಾನಿರತ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು
ಪ್ರತಿಭಟನಾನಿರತ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು   

ದೇವನಹಳ್ಳಿ: ವಿವಿಧ ಪ್ರಗತಿಪರ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ತಾಲ್ಲೂಕಿನಲ್ಲಿ ನಡೆಯಲಿಲ್ಲ. ಬದಲಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಇಲ್ಲಿನ ಮಿನಿವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಕುಳಿತ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಸಂಘ ರಾಜ್ಯ ಘಟಕದ ಉಪಾಧ‍್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಭೂ ಸುಧಾರಣೆ ನೆಪದಲ್ಲಿ ತಿದ್ದುಪಡಿ ತಂದಿರುವ ಮೂರು ಕಾಯ್ದೆಗಳು ರೈತರನ್ನು ಒಕ್ಕಲೆಬ್ಬಿಸುವ ಕಾಯ್ದೆಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಮನ್‍ ಕೀಬಾತ್‍ನಲ್ಲಿ ಜನರಿಗೆ ಮರಳು ಮಾಡಿ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಧನಂಜಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತ ರೈತರ, ಕಾರ್ಮಿಕರ ತಳಮಟ್ಟದ ಸಮುದಾಯದ ವಿರೋಧಿಯಾಗಿದೆ. ನೂರಾರು ಎಕರೆ ಭೂಮಿ ಖರೀದಿಸಲು ಕಾಯ್ದೆಯಲ್ಲಿ ಅವಕಾಶವಿರುವುದರಿಂದ ರೈತರು ಭಿಕ್ಷೆ ಬೇಡಬೇಕಾದ ಸ್ಥಿತಿಗೆ ಬರಲಿದ್ದಾರೆ. ಕಾಯ್ದೆ ವಿರೋಧಿಸದಿದ್ದರೆ ರೈತರಾಗಿ ನಮಗೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ‍್ಯಕ್ಷ ಬಿ.ಕೆ. ಶಿವಪ್ಪ ಮಾತನಾಡಿ, ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯು ರೈತರಿಗೆ ಮರಣಶಾಸನವಾಗಿದೆ. ರಾಜ್ಯ ಸರ್ಕಾರ ರೈತರ ಕೊಳವೆಬಾವಿಗೆ ಅಳವಡಿಸಿರುವ ವಿದ್ಯುತ್ ಮೀಟರ್‌ ಸಂಖ್ಯೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ರೈತರ ಬೆಳೆ ಉತ್ಪನ್ನಕ್ಕೆ ಪೆಟ್ಟು ಬೀಳಲಿದೆ ಎಂದು ದೂರಿದರು.

ವಿವಿಧ ಸಂಘಟನೆಯ ಮುಖಂಡರಾದ ಚಂದ್ರಶೇಖರ್, ಬಚ್ಚಹಳ್ಳಿ ವೆಂಕಟೇಶ್, ನಾಗೇಶ್, ವೀರಣ್ಣ, ಸಿದ್ಧಾರ್ಥ, ನಾರಾಯಣಸ್ವಾಮಿ, ಮುನಿಶಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.