ADVERTISEMENT

ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಆಗ್ರಹ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ದೇವನಹಳ್ಳಿ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 2:45 IST
Last Updated 6 ಅಕ್ಟೋಬರ್ 2020, 2:45 IST
ಪ್ರತಿಭಟನಾ ನಿರತ ದಲಿತ ಸಂಘರ್ಷ ಸಮಿತಿ ಮುಖಂಡರು ಗ್ರೇಡ್-2 ತಹಶೀಲ್ದಾರ್ ಅನಿಲ್ ಕುಮಾರ್ ಗೆ ಮನವಿ ಪತ್ರಸಲ್ಲಿಸಿದರು.
ಪ್ರತಿಭಟನಾ ನಿರತ ದಲಿತ ಸಂಘರ್ಷ ಸಮಿತಿ ಮುಖಂಡರು ಗ್ರೇಡ್-2 ತಹಶೀಲ್ದಾರ್ ಅನಿಲ್ ಕುಮಾರ್ ಗೆ ಮನವಿ ಪತ್ರಸಲ್ಲಿಸಿದರು.   

ದೇವನಹಳ್ಳಿ: ‘ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಗೂಂಡಾ ಮತ್ತು ಅತ್ಯಾಚಾರಿಗಳ ರಾಜ್ಯವಾಗುತ್ತಿದ್ದು ರಾಷ್ಟ್ರಪತಿ ಈ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ‘ಉತ್ತರ ಪ್ರದೇಶ ರಾಜ್ಯದಲ್ಲಿ ಸಂವಿಧಾನದ ಎಲ್ಲಾ ಆಶಯಗಳು ಮಣ್ಣು ಪಾಲಾಗುತ್ತಿವೆ. ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ನಿಷ್ಠಾವಂತ ಅಧಿಕಾರಿಗಳ ಹತ್ಯೆ ನಡೆಯುತ್ತಿದೆ. ದಲಿತ ಯುವತಿಯರ ಅಪಹರಣ, ಅತ್ಯಾಚಾರ, ಕೊಲೆಯಂತಹ ಹೇಯ ಕೃತ್ಯಗಳು ನಡೆಯುತ್ತಿದ್ದು ರಾಷ್ಟ್ರಪತಿ ಸರ್ಕಾರ ವಜಾಗೊಳಿಸಿ ಮತ್ತೊಮ್ಮ ಜನಾದೇಶ ಪಡೆಯಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

‘ದುರ್ಬಲ ವರ್ಗದ ಮೇಲೆ ಪ್ರಬಲ ವರ್ಗದವರು ಮುಗಿಬೀಳುತ್ತಿದ್ದಾರೆ. ಹಥ್‌ರಸ್‌ ಪಟ್ಟಣದ 19 ವರ್ಷದ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಜೀವ ಕಳೆದುಕೊಂಡ ಒಬ್ಬ ದಲಿತ ಯುವತಿ ಸಾವಲ್ಲ. ಉತ್ತರ ಪ್ರದೇಶ ರಾಜ್ಯದಲ್ಲಿ ದಲಿತರ ಮೇಲೆ ಬಿಜೆಪಿಗಿರುವ ಬೆಂಕಿಯ ಜ್ವಾಲೆ, ಸಂವಿಧಾನವನ್ನು ಸುಟ್ಟು ಹಾಕುತ್ತಿರುವ ಸಾವಿನ ಚಿತ್ರಣ ಕಾಣಬಹುದಾಗಿದೆ. ದೇಶದಲ್ಲಿರುವ ಬಿಜೆಪಿ ಆಡಳಿತದಲ್ಲಿ ದಲಿತರನ್ನು ದಮನ ಮಾಡುವ ಒಳಸಂಚು ನಡೆಯುತ್ತಿದೆ’ ಎಂದು ಆರೊಪಿಸಿದರು.

ADVERTISEMENT

ಜಿಲ್ಲಾ ಸಂಘಟನಾ ಸಂಚಾಲಕ ತಿಮ್ಮರಾಯಪ್ಪ, ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ‘ಈ ದುರಂತದ ಬೆನ್ನಲ್ಲೆ ಸೆ.30ರಂದು ಒಬ್ಬ ಬಾಲಕಿಗೆ ಚುಚ್ಚುಮದ್ದು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿದ್ದ ಸಾಕ್ಷ್ಯ ನಾಶ ಮಾಡಿದೆ. ಆಮಿಷಗಳ ಭರವಸೆ ನೀಡಿ ಕುಟುಂಬದವರನ್ನು ಸಂತೈಸುವ ಕೆಲಸ ಮಾಡಲಾಗುತ್ತಿದೆ. ಭಾರತದ ಆತ್ಮವನ್ನು ದಹಿಸುವ ಪ್ರಕರಣ ಈ ಎರಡು ಘಟನೆಗಳಿಂದ ನಡೆಯುತ್ತಿದೆ. ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಆರೋಪಿಸಿದರು.

‘ನೊಂದವರಿಗೆ, ಅಸಹಾಯಕರಿಗೆ, ಅಲ್ಪಸಂಖ್ಯಾತರಿಗೆ, ರಕ್ಷಣೆ ನೀಡದ ಉತ್ತರ ಪ್ರದೇಶ ಸರ್ಕಾರ ಅಧಿಕಾರ ನಡೆಸುವ ನೈತಿಕತೆ ಕಳೆದುಕೊಂಡಿದೆ. ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಜೋಗಿಹಳ್ಳಿ ನಾರಾಯಣಸ್ವಾಮಿ, ವಿಜಯಪುರ ನಾರಾಯಣಸ್ವಾಮಿ, ಎಚ್.ಕೆ.ವೆಂಕಟೇಶಪ್ಪ, ಸಿ.ಮುನಿಯಪ್ಪ, ತಾಲ್ಲೂಕು ಸಂಘಟನಾ ಸಂಚಾಲಕರಾದ ಸಿ.ಮುನಿರಾಜ್, ಸಿ.ಬಿ.ಮೋಹನ್, ಹಾರೋಹಳ್ಳಿ ವೆಂಕಟೇಶ್, ವಿ.ರಮೇಶ್, ಸಿ.ಎಂ.ಮುರುಳಿಧರ, ರವಿಕುಮಾರ್, ಗಣೇಶ್, ವೇಣುಗೊಪಾಲ್, ನಾಗವೇಣಿ, ಚಿಕ್ಕಣ್ಣ, ಪೂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.