ADVERTISEMENT

ಪುರಸಭೆಯಿಂದ ಉದ್ದಿಮೆ ಪರವಾನಗಿ ಆಂದೋಲನ: ಎಂ.ಮೂರ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:42 IST
Last Updated 19 ಅಕ್ಟೋಬರ್ 2018, 12:42 IST
ಪ್ರತಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿದರು
ಪ್ರತಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿದರು   

ದೇವನಹಳ್ಳಿ: ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 2018–19ನೇ ಸಾಲಿನಲ್ಲಿ ‘ಸರಳ ಉದ್ದಿಮೆ ಪರವಾನಗಿ ಆಂದೋಲನ’ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮೂರ್ತಿ ತಿಳಿಸಿದರು.

ಇಲ್ಲಿನ ಪುರಸಭೆ ಆಡಳಿತ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ಮುನಿಸಿಪಲ್ ಕಾಯ್ದೆ 1964ರ ಅಧಿನಿಯಮ 256ರ ಅಡಿಯಲ್ಲಿ ಸೂಚಿಸಿರುವಂತೆ ಯಾವುದೇ ಅಂಗಡಿ, ವ್ಯಾಪಾರ ಉದ್ದಿಮೆಗಳಂತಹ ಹೋಟೆಲ್, ಫ್ಲೋರ್ ಮಿಲ್, ಬೇಕರಿ ಮುಂತಾದ ವಹಿವಾಟು ನಡೆಸುತ್ತಿದ್ದಲ್ಲಿ ಪುರಸಭೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ಪ್ರಾವಿಜನ್‌ ಸ್ಟೋರ್, ಬಾರ್ ಮತ್ತು ರೆಸ್ಟೋರೆಂಟ್, ಕಲ್ಯಾಣ ಮಂಟಪಗಳು, ಲಾಡ್ಜ್‌ಗಳು, ದಿನಸಿ ಅಂಗಡಿ, ತರಕಾರಿ ಅಂಗಡಿ, ವೆಲ್ಡಿಂಗ್ ಶಾಪ್, ಪೆಟ್ರೋಲ್ ಬಂಕ್, ಚಲನ ಚಿತ್ರಮಂದಿರಗಳು, ಮೊಬೈಲ್ ಮತ್ತು ಆಟೊಮೊಬೈಲ್ ಅಂಗಡಿ, ಎಲ್ಲ ರೀತಿಯ ವಾಹನಗಳ ಷೋರೂಂಗಳು ಮತ್ತು ಇತರೆ ವಹಿವಾಟುಗಳನ್ನು ನಡೆಸುವ ಮಾರಾಟ ಮಳಿಗೆಗಳಿಗೆ ಕಾಯ್ದೆ ಅನ್ವಯಿಸಲಿದೆ ಎಂದರು.

ADVERTISEMENT

ಈ ಕಾಯ್ದೆ ಅನ್ವಯ ದಂಡ ವಿಧಿಸುವುದು, ಅಂಗಡಿ ಮುಟ್ಟುಗೋಲು ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡುವ ಅಧಿಕಾರ ಪುರಸಭೆಗೆ ಇದೆ ಎಂದು ಮಾಹಿತಿ ನೀಡಿದರು.

ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸದೆ ಸಂಬಂಧ ಪಟ್ಟವರು ಪರವಾನಗಿಯನ್ನು ಪಡೆದು ಸಹಕರಿಸಬೇಕು ಎಂದರು. ಅ.25 ರಂದು ಗಾಂಧಿಚೌಕ, ಅ.26 ರಂದು ಹಳೇ ಬಸ್‌ ನಿಲ್ದಾಣ, ಅ.27 ರಂದು ಅಂಬೇಡ್ಕರ್ ಭವನದಲ್ಲಿ ಉದ್ದಿಮೆ ಪರವಾನಗಿ ಆಂದೋಲನ ನಡೆಯಲಿದೆ ಎಂದರು.

ಮಾಲೀಕನ ಭಾವಚಿತ್ರ–1, ಅಂಗಡಿ ಛಾಯಾಚಿತ್ರ ಚಿತ್ರ–1, ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ, ಹಿಂದಿನ ವರ್ಷದ ಉದ್ದಿಮೆ ಪರನಾವಗಿ ಪತ್ರ, ಚಾಲ್ತಿ ವರ್ಷದ ಕಂದಾಯ ರಸೀದಿ, ಬಾಡಿಗೆ ಕರಾರು ಪತ್ರ, ವಿದ್ಯುತ್ ಬಿಲ್ ನೀಡಿ ಅನ್‌ಲೈನ್ ಮೂಲಕ ಅರ್ಜಿಯನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಪುರಸಭಾ ಉಪಾಧ್ಯಕ್ಷೆ ಆಶಾರಾಣಿ, ಸದಸ್ಯರಾದ ಜಿ.ಎ.ರವೀಂದ್ರ, ಎನ್.ರಘು, ವಿ.ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.