ADVERTISEMENT

ಖರೀದಿ ಕೇಂದ್ರದ ಎಡವಟ್ಟು

ರಾಗಿ ಸರಬರಾಜು ಮಾಡಿದ್ದು ಒಬ್ಬರು, ಹಣ ಸಂದಾಯವಾಗಿರುವುದು ಬೇರೊಬ್ಬರಿಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:54 IST
Last Updated 31 ಅಕ್ಟೋಬರ್ 2020, 4:54 IST

ದೊಡ್ಡಬಳ್ಳಾಪುರ: ಅಗತ್ಯ ಇರುವ ಎಲ್ಲ ದಾಖಲೆ ನೀಡಿ ಬೆಂಬಲ ಬೆಲೆ ಯೋಜನೆಯಡಿ 2020ರ ಮಾರ್ಚ್‌ನಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಿ ಹಣ ಬರುತ್ತದೆ ಎಂದು ಕಾದು ಕುಳಿತಿದ್ದ ರೈತ ಸುರೇಶ್‌ ಎಂಬುವವರ ಹಣ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೇರೊಬ್ಬ ರೈತರ ಖಾತೆಗೆ ಜಮೆ ಆಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರೈತ ಸುರೇಶ್‌, ಕರೇನಹಳ್ಳಿ ಗ್ರಾಮದಲ್ಲಿ ಭೂಮಿ ಹೊಂದಿದ್ದು, ರಾಗಿ ಸರಬರಾಜು ಮಾಡಿದ್ದ ಹಣದ ಬಾಬ್ತು ₹23,017 ಬರಬೇಕಾಗಿತ್ತು. ಆದರೆ, ಈ ಹಣ ತಾಲ್ಲೂಕಿನ ಚುಂಚೇಗೌಡನಹೊಸಹಳ್ಳಿ ಕೆಂಪರಗಯ್ಯ ಎಂಬುವವರ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ ಎಂದರು.

ರಾಗಿ ಸರಬರಾಜು ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರಿಂದ ಕೃಷಿ ಇಲಾಖೆ ವತಿಯಿಂದ ನೀಡಲಾಗುವ ಫ್ರುಟ್‌ ಐಡಿ, ಆಧಾರ್‌ ಸಂಖ್ಯೆ, ರಾಷ್ಟ್ರೀಕೃತ ಬ್ಯಾಂಕ್‌ ಪಾಸ್‌ ಪುಸ್ತಕದ ನಕಲು ಪ್ರತಿ ಪಡೆದ ನಂತರವೇ ರೈತರಿಂದ ರಾಗಿ ಖರೀದಿ ಮಾಡಲಾಗಿದೆ. ಇಷ್ಟೆಲ್ಲ ದಾಖಲೆ ಇದ್ದರೂ ಸಹ ನೇರ ನಗದು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸುರೇಶ್‌ ಅವರ ಖಾತೆಗೆ ಬರಬೇಕಿದ್ದ ಹಣ ಕೆಂಪರಂಗಯ್ಯ ಅವರ ಹೆಸರಿಗೆ ಹೇಗೆ ಜಮೆಯಾಗಿದೆ ಎನ್ನುವುದೇ ಈಗ ಸುರೇಶ್‌ ಅವರ ಪ್ರಶ್ನೆಯಾಗಿದೆ.

ADVERTISEMENT

ಈ ಬಗ್ಗೆ ಸ್ಥಳೀಯ ರಾಗಿ ಖರೀದಿ ಕೇಂದ್ರ ಅಧಿಕಾರಿ ಪುಟ್ಟಸ್ವಾಮಿ ಅವರ ಬಳಿಗೆ ಹತ್ತಾರು ಬಾರಿ ಹಣ ಕೊಡಿ, ಇಲ್ಲವೆ ಹಣದ ಬಗ್ಗೆ ಮಾಹಿತಿ ನೀಡಿ ಎಂದು ಅಲೆದಾಡಿದ ನಂತರ ನೀಡಿರುವ ಉತ್ತರ ‘ನಿಮ್ಮ ಹಣ ಬೇರೊಬ್ಬ ರೈತರ ಖಾತೆಗೆ ಜಮೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಣ ಕೊಡಿಸಲಾಗುವುದು’ ಎನ್ನುತ್ತಿದ್ದಾರೆ. ಆದರೆ, ಹಣ ಮಾತ್ರ ಬಂದಿಲ್ಲ ಎಂದಿದ್ದಾರೆ.

ಸರ್ಕಾರ ಈಚೆಗೆ ರೈತರಿಗೆ ನೀಡುತ್ತಿರುವ ಬೆಳೆ ಪರಿಹಾರ, ಬರ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿ ಹಣ ಸೇರಿದಂತೆ ಸರ್ಕಾರದ ಇತರ ಯೋಜನೆಗಳ ಸಹಾಯ ಧನವನ್ನು ಆಧಾರ್‌ ಕಾರ್ಡ್‌ ಅಥವಾ ಬ್ಯಾಂಕ್‌ ಖಾತೆ ಸಂಖ್ಯೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡುತ್ತಿದೆ. ಆದರೆ, ಸುರೇಶ್‌ ಅವರ ಖಾತೆಗೆ ರಾಗಿ ಖರೀದಿ ಹಣ ಜಮೆ ಮಾಡುವಾಗ ಈ ಯಾವುದನ್ನು ಸಹ ಪರಿಶೀಲನೆ ಮಾಡದೆ ಅಧಿಕಾರಿಗಳು ಬೇರೊಬ್ಬ ರೈತರ ಖಾತೆಗೆ ಯಾವ ರೀತಿ ಹಣ ವರ್ಗಾವಣೆ ಮಾಡಿದರು ಎನ್ನುವುದೇ ಈಗ ಪ್ರಶ್ನೆಯಾಗಿದೆ.

ಬೆಂಬಲ ಬೆಲೆ ಯೋಜನೆಯಡಿ ತಾಲ್ಲೂಕಿನ ರೈತರಿಗೆ ಹಣ ಬಂದಿಲ್ಲ. ಅಲ್ಲದೆ, ಕೆಲ ರೈತರಿಗೆ ಅರ್ಧದಷ್ಟು ಹಣ ಮಾತ್ರ ಸಂದಾಯವಾಗಿದೆ. ಸರ್ಕಾರ ಸಹಾಯಧನ ರೈತರಿಗೆ ನೇರ ನಗದು ವರ್ಗಾವಣೆ ಮಾಡಿದ ನಂತರ ಬ್ಯಾಂಕ್‌ನಿಂದ ವರ್ಗಾವಣೆ ಆಗಿರುವ ಖಾತೆದಾರರ ವಿವರ ಪಡೆದು ಫಲಾನುಭವಿ ಹೆಸರಿನೊಂದಿಗೆ ತಾಳೆ ನೋಡಬೇಕು. ಹೆಸರು ಹೊಂದಾಣಿಕೆಯಾಗದೆ ಇರುವ ಸಂದರ್ಭದಲ್ಲಿ ನೈಜ್ಯ ಫಲಾನುಭವಿಗಳಿಗೆ ಮಾತ್ರ ಹಣ ಜಮೆಯಾಗುವಂತೆ ಮಾಡಬೇಕಿದೆ. ಸರ್ಕಾರದ ಹಣ ವರ್ಗಾವಣೆಯಾಗಿರುವ ಬಗ್ಗೆ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಅಥವಾ ಸಂಬಂಧಿಸಿದ ಕಚೇರಿ ಸೂಚನೆ ಫಲಕದಲ್ಲಿ ಪ್ರಕಟಿಸಬೇಕು. ಆಗ ಮಾತ್ರ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿರವಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.