
ಹೊಸಕೋಟೆ:10ನೇ ತರಗತಿ ಓದುತ್ತಿರುವ ತಾಲ್ಲೂಕಿನ 3,800 ಮಕ್ಕಳಿಗೆ ಶಾಸಕ ಶರತ್ ಬಚ್ಚೇಗೌಡ ಸ್ವಂತ ಖರ್ಚಿನಲ್ಲಿ ‘ಅರಿವಿನ ಬೆಳಕು’ ಎಂಬ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ಸಂಚಿಕೆಗಳನ್ನು ವಿತರಣೆ ಮಾಡಿದರು.
ನಗರದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶ್ನೆ ಪತ್ರಿಕೆ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿ, ಗುಣಮಟ್ಟದ ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿ ವಂಚಿತನಾಗಬಾರದೆಂದು ಕ್ಷೇತ್ರಶಿಕ್ಷಣಾಧಿಕಾರಿ ಪದ್ಮನಾಭ್ ಅವರ ಜೊತೆ ಚರ್ಚಿಸಿ ಈ ಕ್ರಮವಹಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಈಗಾಗಲೇ ಅಂತರ್ ಜಾಲದಲ್ಲಿ 10ನೇ ತರಗತಿ ಮಕ್ಕಳ ಅರಿವು ಪ್ರಶ್ನೆ ಪತ್ರಿಕೆಯ 400 ಪುಟಗಳ ಮಾಲಿಕೆ ಪ್ರಕಟಿಸಿತ್ತು. ಅದನ್ನು ಪುನಃ ಭಾಷಾ, ಕೋರ್ ವಿಷಯಗಳೆಂದು ವಿಂಗಡಿಸಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಿ ರಾಜ್ಯದಲ್ಲೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ 10ನೇ ತರಗತಿ ಓದುತ್ತಿರುವ 3,800 ಮಕ್ಕಳಿಗೂ ವಿತರಿಸಲಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ100 ರಷ್ಟು ಫಲಿತಾಂಶ ತಲುಪುವ ಉದ್ದೇಶದಿಂದ ಸರ್ಕಾರಿ ಮತ್ತು ಖಾಸಗಿ ಎಂಬ ತಾರತಮ್ಯ ಮಾಡದೆ ಎಲ್ಲಾ ಮಕ್ಕಳಿಗೂ ಎರಡು ಭಾಷೆಯಲ್ಲಿ ಭಾಷಾ ವಿಷಯ ಮತ್ತು ಕೋರ್ ವಿಷಯಗಳ ಪ್ರತಿ ವಿಷಯದ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ಸಂಚಿಕೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಇನ್ಫೋಸಿಸ್ ಸಹಯೋಗದಲ್ಲಿ ನಿರ್ಮಾಣಗೊಳ್ಳುತ್ತಿರುವ 30 ಮ್ಯಾಗ್ನೆಟ್ ಶಾಲೆಯಲ್ಲಿ 1,200 ಮಕ್ಕಳಿಗೆ ಬೇಕಾಗುವ ವ್ಯವಸ್ಥೆ ಮಾಡಿಕೊಡಲಾಗುವುದು. ಜೊತೆಗೆ ಪ್ರತಿ ಶಾಲೆಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದರು.
ಪ್ರೇರಣಾ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಉಮಾ ಮಹೇಶ್ವರ ಪರೀಕ್ಷೆ ಹೇಗೆ ಎದುರಿಸಬೇಕು, ಕಬ್ಬಿಣದ ಕಡಲೆ ಎಂದು ತಿಳಿಯುವ ಗಣಿತ ಮತ್ತಿತರ ವಿಷಯಗಳನ್ನು ಹೇಗೆ ಸುಲಭವಾಗಿ ಕಲಿಯಬಹುದು ಎಂಬುದನ್ನು ತಿಳಿಸಿಕೊಟ್ಟರು.
ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಬೈಲಾಂಜಿನಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಪದ್ಮನಾಬ್, ಕೋಡಿಹಳ್ಳಿ ಸುರೇಶ್, ಸುಬ್ಬರಾಜು, ತುಮಕೂರು ವಿಶ್ವ ವಿದ್ಯಾಲಯ ಸಿಂಡಿಕೆಟ್ ಸದಸ್ಯ ದೇವರಾಜ್, ವೈಎಸ್‌ಎನ್ ಮಂಜು, ಬಿಎಂಆರ್‌ಡಿ ನಿರ್ದೇಶಕ ಕೇಶವಮೂರ್ತಿ, ಬಿ.ವಿ. ಭೈರೇಗೌಡ, ವಿಜಯ್‌ಕುಮಾರ್ ಇದ್ದರು.
ರಾಜ್ಯದಲ್ಲೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಅರಿವು ಬೆಳಕು ಕಾರ್ಯಕ್ರಮದ ಮೂಲಕ 10 ನೇ ತರಗತಿ ಎಲ್ಲಾ ಮಕ್ಕಳಿಗೂ ಉತ್ತರ ಸಹಿತ ಸುಮಾರು 8000 ಪ್ರಶ್ನೆಗಳನ್ನು ವಿತರಿಸಲಾಗಿದೆಶರತ್ ಬಚ್ಚೇಗೌಡ ಶಾಸಕ
ನರೇಗಾ ತಿದ್ದುಪಡಿ; ಸ್ಪಷ್ಟತೆ ಇಲ್ಲ
ಕೇಂದ್ರ ಸರ್ಕಾರ ನರೇಗಾ ಹೆಸರನ್ನು ಮಾತ್ರ ಬದಲಿಸುತ್ತಿಲ್ಲ. ಅದಕ್ಕೆ ಗುರಿಗಳನ್ನು ಸಹ ನಿಗದಿ ಪಡಿಸುತ್ತಿದೆ. ಜೊತೆಗೆ ಅದಕ್ಕೆ ಕೇಂದ್ರದಲ್ಲೇ ಅನುಮೋದನೆ ಪಡೆದುಕೊಳ್ಳಬೇಕಿದೆ. ಇದರಿಂದ ಹಳ್ಳಿಯಲ್ಲಿ ನಡೆಯೊ ಕಾಮಗಾರಿಗೆ ದೆಹಲಿಯಲ್ಲಿ ಅನುಮತಿ ಪಡಿಯುವಂತಹ ಸ್ಥಿತಿ ಎದುರಾಗಲುಬಹುದು. ಅಲ್ಲದೆ ಸಣ್ಣಪುಟ್ಟ ಗುತ್ತಿಗೆದಾರರು ಬೀದಿಪಾಲಗುವ ಸಂಭವ ಇದೆ. ಅಲ್ಲದೆ ಇದುವರೆಗೂ ಈ ಕಾಮಗಾರಿಗಳಿಗೆ ಸಂಬಂದಿಸಿದಂತೆ ಎಷ್ಟು ಹಣ ಬಿಡುಗಡೆ ಮಾಡಬೇಕು ಎಂಬುದರ ಸ್ಪಷ್ಟತೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.