ಆನೇಕಲ್ : ತಾಲ್ಲೂಕಿನ ನಾಗೇಶ್ವರ ಕ್ಷೇತ್ರ ಕಿತ್ತಗಾನಹಳ್ಳಿಯಲ್ಲಿ ಭೂನೀಳ ಸಮೇತ ಶ್ರೀನಿವಾಸ ದೇವರ ರಥೋತ್ಸವ ವೈಭವದಿಂದ ನೆರವೇರಿತು.
ಸುತ್ತಮುತ್ತಲ ಗ್ರಾಮಗಳ ಭಕ್ತರು ಸೇರಿದಂತೆ ನೂರಾರು ಮಂದಿ ರಥೋತ್ಸವಕ್ಕೆ ಸಾಕ್ಷಿಯಾದರು.
ದೇವಾಲಯದ ಅರ್ಚಕ ಸೂರ್ಯನಾರಾಯಣ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿಸಿದ ನಂತರ ಉತ್ಸವ ಮೂರ್ತಿಯನ್ನು ಮಧ್ಯಾಹ್ನ 2ರ ವೇಳೆಗೆ ರಥದಲ್ಲಿ ಕುಳ್ಳರಿಸಲಾಯಿತು. ಮೂರ್ತಿಯನ್ನು ಕುಳ್ಳರಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಗೋವಿಂದ... ಗೋವಿಂದ... ಎಂಬ ಜಯಘೋಷ ಮೊಳಗಿಸಿದರು. ದವನ ಚುಚ್ಚಿದ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ರಥವು ದೇವಾಲಯದ ಪ್ರದಕ್ಷಿಣೆ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಉರಿಬಿಸಿಲನ್ನು ಲೆಕ್ಕಿಸದೇ ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರು ಉರಿಬಿಸಿಲಿನಲ್ಲೂ ಉರುಳು ಸೇವೆ ಮಾಡುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು.
ರಥೋತ್ಸವ ಪ್ರಯುಕ್ತ ಸ್ವಾಮಿಗೆ ಅಭಿಷೇಕ, ಪೂಜೆ, ವಿಶೇಷ ಅಲಂಕಾರ, ಗಾಯತ್ರಿ ಹೋಮ, ಸುದರ್ಶನ ಹೋಮ ನೆರವೇರಿಸಲಾಯಿತು. ನಾದಸ್ವರ ಮತ್ತು ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರಗು ನೀಡಿದವು. ಎತ್ತುಗಳ ಮೆರವಣಿಗೆ ಭಕ್ತರ ಕಣ್ಮನ ಸೆಳೆಯಿತು.
ಗ್ರಾಮ ಹಲವೆಡೆ ಅರವಂಟಿಕೆ ಸ್ಥಾಪಿಸಿ ಬಂದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ನೀಡಿ ಬಿಸಿಲ ಬೇಗೆ ತಣಿಸಿದರು. ರಥೋತ್ಸವದ ಅಂಗವಾಗಿ ಭಾನುವಾರ ವಸಂತೋತ್ಸವ, ಹನುಮಂತೋತ್ಸವ, ಶೇಷವಾಹನೋತ್ಸವ, ಶಯನೋತ್ಸವ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.