ADVERTISEMENT

ಸಂಚಾರ ನಿಯಮ ಪಾಲಿಸಲು ಮನವಿ

ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 13:23 IST
Last Updated 14 ಸೆಪ್ಟೆಂಬರ್ 2019, 13:23 IST
ವಿಜಯಪುರದ ಬಸ್ ನಿಲ್ದಾಣದಲ್ಲಿ ಜೇಸಿಐ ಹಾಗೂ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಜಲಸಂರಕ್ಷಣೆ ಹಾಗೂ ಸಾರಿಗೆ ನಿಯಮಗಳ ಪಾಲನೆ ಕುರಿತು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು
ವಿಜಯಪುರದ ಬಸ್ ನಿಲ್ದಾಣದಲ್ಲಿ ಜೇಸಿಐ ಹಾಗೂ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಜಲಸಂರಕ್ಷಣೆ ಹಾಗೂ ಸಾರಿಗೆ ನಿಯಮಗಳ ಪಾಲನೆ ಕುರಿತು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು   

ವಿಜಯಪುರ: ಸಾರಿಗೆ ಇಲಾಖೆ ಜಾರಿಗೊಳಿಸಿರುವ ಸಂಚಾರ ನಿಯಮಗಳು ಪಾಲನೆ ಮಾಡುವುದು, ಜಲಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ ಎಂದು ಜೆಸಿಐ ಪದಾಧಿಕಾರಿಗಳು, ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಜತೆಗೆ ಜಾಗೃತಿ ಜಾಥಾ ಕಾರ್ಯಕ್ರಮ ಮಾಡಿದರು.

ಇಲ್ಲಿನ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಿಂದ ಜಲ ಸಂರಕ್ಷಣೆ, ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸಲು ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತ, ಜನರ ಗಮನ ಸೆಳೆದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ, ಸೈಕಲ್‌ಗೆ ಹೆಲ್ಮೆಟ್ ಹಾಕುವ ಮೂಲಕ ಅದರ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು.

ಜೆಸಿಐ ಮುಖಂಡ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ಜಲಸಂರಕ್ಷಣೆಯ ಕಾರ್ಯಕ್ರಮಗಳು ಕೇವಲ ಜಾಗೃತಿ ಘೋಷಣೆಗೆ ಸೀಮಿತವಾಗಬಾರದು. ಅವುಗಳನ್ನು ಪಾಲಿಸುವ ಮೂಲಕ ಇತರರು ಅದನ್ನು ಅನುಸರಿಸುವಂತೆ ಮಾಡಬೇಕು. ಪ್ರತಿಯೊಬ್ಬರೂ ಸ್ವಂತವಾಗಿ ಜಲ ಸಂಪತ್ತನ್ನು ಉಳಿಸಲು ಪ್ರಯತ್ನ ಮಾಡಬೇಕು ಎಂದರು.

ADVERTISEMENT

ಮುಖಂಡ ಜನಾರ್ಧನ್ ಮಾತನಾಡಿ, ನೀರನ್ನು ಉಳಿಸುವುದು ಹಾಗೂ ಜಲ ಸಂರಕ್ಷಣೆಯನ್ನು ಪಾಲನೆ ಮಾಡುವ ಮಾರ್ಗವನ್ನು ಅನುಸರಿಸಿದರೆ ಜಲ ಸಂಪನ್ಮೂಲ ವೃದ್ಧಿಯಾಗುತ್ತದೆ ಎಂದರು.

ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ ಅಪಘಾತಗಳು ಸಂಭವಿಸದಂತೆ ಕಾಳಜಿ ವಹಿಸಬೇಕು. 18 ವರ್ಷ ಮೇಲ್ಪಟ್ಟವರು ವಾಹನ ಚಾಲನಾಪತ್ರ ಪಡೆದುಕೊಳ್ಳಬೇಕು. ವಾಹನ ಸವಾರರು ವಾಹನದ ನೋಂದಣಿ ಪ್ರಮಾಣಪತ್ರ ಹಾಗೂ ವಿಮಾಪತ್ರಗಳನ್ನು ವಾಹನದ ಜತೆಯಲ್ಲಿ ಹೊಂದಿರಬೇಕು ಎಂದರು.

ಜೇಸಿಐ ನಗರ ಘಟಕದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಸಂಚಾರ ನಿಯಮಗಳ ಪಾಲನೆ ಮಹತ್ವದ ಬಗ್ಗೆ ಸಾರಿಗೆ ಇಲಾಖೆ ವ್ಯಾಪಕವಾಗಿ ಜಾಗೃತಿ ಮೂಡಿಸುವುದರ ಜೊತೆಗೆ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿದೆ. ಇದರ ನಡುವೆಯೂ ಬಹುತೇಕರು ಮದ್ಯ ಸೇವಿಸಿ ಇಲ್ಲವೇ ಮೊಬೈಲ್‌ನಲ್ಲಿ ಸಂಭಾಷಣೆಯೊಂದಿಗೆ ವೇಗವಾಗಿ ವಾಹನ ಚಾಲನೆ ಮಾಡುವುದು ಕಂಡು ಬರುತ್ತಿದೆ. ಇದು ಅಪಾಯ ಎಂಬುದರ ಅರಿವಿದ್ದರೂ ನಿರ್ಲಕ್ಷಿಸಲಾಗುತ್ತಿದೆ ಎಂದರು.

ವೇಗದ ಚಾಲನೆ, ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ಸಂಭವಿಸುತ್ತಿರುವ ಅಪಘಾತಗಳಿಂದ ಕುಟುಂಬಗಳು ಬೀದಿಪಾಲಾಗುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸುವುದರ ಜೊತೆಗೆ ಕುಟುಂಬಗಳಲ್ಲಿ ಇರುವವರಿಗೆ ಜಾಗೃತಿ ಮೂಡಿಸಬೇಕು ಎಂದರು.

ಜೆಸಿಐ ನಗರ ಘಟಕದ ನಿಯೋಜಿಯ ಅಧ್ಯಕ್ಷ ಜನಾರ್ಧನ್, ರಾಘವೇಂದ್ರ, ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ, ಉಪನ್ಯಾಸಕ ಮಂಜುನಾಥ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.