ADVERTISEMENT

ಸೋಂಕಿತರ ಮೇಲೆ ಗೌರವ ಇರಲಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:09 IST
Last Updated 4 ಜೂನ್ 2020, 17:09 IST
ತರಕಾರಿ ವಿತರಿಸುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರು.
ತರಕಾರಿ ವಿತರಿಸುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರು.   

ದೇವನಹಳ್ಳಿ: ‘ಜೀವನೋಪಾಯಕ್ಕಾಗಿ ಅಲೆದಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೊನಾ ಸೋಂಕು ತಗಲಿದವರನ್ನು ಕೀಳು ದೃಷ್ಟಿಯಿಂದ ಕಾಣುವುದು ಸಲ್ಲದು’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಇಲತೊರೆ ಗ್ರಾಮದ ಸ್ಥಳೀಯರಿಗೆ ದಿನಸಿ ಮತ್ತು ತರಕಾರಿಗಳ ಕಿಟ್‌ ವಿತರಿಸಿ ಅವರು ಮಾತನಾಡಿದರು.

‘ಇಲತೊರೆ ಗ್ರಾಮದ ವ್ಯಕ್ತಿಗೆ ಕೊರೊನ ಸೋಂಕು ಪತ್ತೆಯಾದ ನಂತರ ಗ್ರಾಮದಲ್ಲಿರುವ ಸ್ಥಳೀಯರು ಸೋಂಕಿತರ ಮನೆಯನ್ನು ನೋಡುವ ದೃಷ್ಟಿ ವಿಚಿತ್ರವಾದದ್ದು. ಅದೇ ರೀತಿ ಸೋಂಕಿತರ ಗ್ರಾಮಗಳ ಜನರನ್ನು ಬೇರೆ ಗ್ರಾಮದವರು ವಿವಿಧ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಮಾತುಗಳಿಗೆ ಬಣ್ಣ ಕಟ್ಟಿ ಹೇಳುತ್ತಿರುವ ರೀತಿ ಅಮಾನವೀಯ. ಇಂತಹ ಚಾಳಿಯನ್ನು ಮೊದಲು ಕೈಬಿಡಬೇಕು’ ಎಂದು ಹೇಳಿದರು.

ADVERTISEMENT

ಸೀಲ್ ಡೌನ್ ಮಾಡಿರುವ ಗ್ರಾಮದಲ್ಲಿನ ಸ್ಥಳೀಯರಿಗೆ ದಿನಸಿ ಮತ್ತು ತರಕಾರಿ ಖರೀದಿಸಲು ಮತ್ತು ಬೇರೆಡೆಯಿಂದ ಮಾರಾಟ ಮಾಡುವವರು ಬರುತ್ತಿಲ್ಲ. ಹತ್ತಾರು ದಿನಗಳಿಂದ ಸ್ಥಳೀಯರು ಸಂಕಷ್ಟದಲ್ಲಿದ್ದಾರೆ. ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದು ಹೇಳಿದರು.

ಸೋಂಕಿತರನ್ನು ಕೆಲವು ಕಡೆ ಪ್ರಾಣಿಗಳಿಗಿಂತ ಕಡೆ ಎಂಬಂತೆ ಸ್ಥಳೀಯರು ನೋಡುತ್ತಿದ್ದಾರೆ. ಸೋಂಕಿತ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದು ಬಂಧನದಲ್ಲಿದ್ದರೂ ಸಮಾಜ ನಿಕೃಷ್ಟವಾಗಿ ನೋಡುತ್ತದೆ. ಅದೇ ಪರಿಸ್ಥಿತಿ ನಮಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಸೋಂಕು ಹರಡಲಿ ಎಂದು ಯಾರೂ ಬಯಸುವುದಿಲ್ಲ. ಪ್ರತಿಯೊಬ್ಬರೂ ಸೋಂಕು ಕಡಿವಾಣ ಹಾಕಲು ಅಂತರ ಕಾಯ್ದುಕೊಳ್ಳವುದು ಅವಶ್ಯಕ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಚನ್ನಕೇಶವ, ನಾಗೇಶ್, ಮುನೇಗೌಡ, ಮಂಜುನಾಥ್, ಅಂಗಡಿ ಮಹೇಶ್, ಅರುಣ್, ಮಹೇಶ್, ಮಧು, ಚಂದ್ರು, ಪ್ರಭು, ಚನ್ನವೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.