ADVERTISEMENT

‘ಮಹಿಳೆಯರ ಸಾಧನೆ ಗೌರವಿಸಿ’

ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ‘ಮಹಿಳಾ ದಿನಾಚರಣೆ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:04 IST
Last Updated 13 ಮಾರ್ಚ್ 2019, 14:04 IST
ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆಯನ್ನು ಡಾ.ವಿ.ಪ್ರಶಾಂತ್ ಉದ್ಘಾಟಿಸಿದರು
ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಹಿಳಾ ದಿನಾಚರಣೆಯನ್ನು ಡಾ.ವಿ.ಪ್ರಶಾಂತ್ ಉದ್ಘಾಟಿಸಿದರು   

ವಿಜಯಪುರ: ಮಹಿಳೆಯರು ಮಾಡುವ ಸಾಧನೆಯನ್ನು ಗೌರವದಿಂದ ಕಾಣುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಘಟಕದ ಯುವ ಸಂಯೋಜಕ ಡಾ.ವಿ.ಪ್ರಶಾಂತ್ ಹೇಳಿದರು.

ಇಲ್ಲಿನ ಯಲುವಹಳ್ಳಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ‘ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಬಲ, ವಿದ್ಯಾವಂತ, ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣವಾಗಬೇಕಾದರೆ ಪುರುಷರಷ್ಟೆ ಸಮಾನವಾಗಿ ಮಹಿಳೆಯರ ಸಹಭಾಗಿತ್ವ ಇರಬೇಕು. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1909 ರಲ್ಲಿ ನಡೆದ ‘ಕೂಲಿ ಚಳುವಳಿ’ಯಿಂದ ಮಹಿಳಾ ದಿನದ ಕಲ್ಪನೆ ಮೂಡಿತು’ ಎಂದು ವಿವರಿಸಿದರು.

ADVERTISEMENT

‘ವಿವಿಧ ಬೇಡಿಕೆಗಳಿಗಾಗಿ ಬಹುದೊಡ್ಡ ಪ್ರಮಾಣದಲ್ಲಿ ಅಂದು ನಡೆದ ಸರ್ಕಾರಿ ಕಾರ್ಮಿಕರ ಚಳವಳಿಯಲ್ಲಿ ಮಹಿಳಾ ಕಾರ್ಮಿಕರು ಬಹುದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸಿದ್ದರು. ಅಂದಿನ ಚಳವಳಿಯಲ್ಲಿ ಪ್ರತಿಭಟನೆಯ ಬಲ ಹೆಚ್ಚಿಸಿದ್ದ ಮಹಿಳೆಯರಿಗಾಗಿ ಮೊದಲ ಬಾರಿಗೆ ಮಹಿಳಾ ದಿನವನ್ನು ಅರ್ಪಿಸಲಾಗಿದ್ದು ಇಂದು ವಿಶ್ವದಾದ್ಯಂತ ಆಚರಣೆಯಲ್ಲಿದೆ’ ಎಂದರು.

ಕೈಗಾರಿಕಾ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕಿ ವಿ.ಮಂಜುಳ ಮಾತನಾಡಿ, ‘ವಿಶ್ವಸಂಸ್ಥೆ ಹಾಕಿಕೊಟ್ಟ ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳ ಮಾರ್ಗಸೂಚಿಗಳು ಅದೆಷ್ಟು ಕಾರ್ಯರೂಪಕ್ಕೆ ಬರುತ್ತವೆಯೋ ಗೊತ್ತಿಲ್ಲ. ಆದರೆ, ದೇಶದ ಬಹುದೊಡ್ಡ ಸವಾಲಾಗಿರುವ ಮಹಿಳೆಯ ರಕ್ಷಣೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲೇಬೇಕಾದ ಅನಿವಾರ್ಯತೆ ಇದೆ’. ಎಂದು ತಿಳಿಸಿದರು.

‘ಮಹಿಳಾ ಸಶಕ್ತಿಕರಣ, ಮಹಿಳೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಜಾಗೃತಿಯಂತಹ ಯೋಜನೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಅದು ಇನ್ನಷ್ಟು ಹೆಚ್ಚಾಗಬೇಕಿದೆ’ ಎಂದರು.

ಕಾರ್ಯಕ್ರಮದ ಅಂಗವಾಗಿ ಮಹಿಳಾ ಸಬಲೀಕರಣ, ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಪಟ್ಟಣದ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಪ್ರದೀಪ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ 2018 ನೇ ಸಾಲಿನ ಬೇಸಿಗೆ ಪ್ರಾಯೋಜಿತ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದ ಪ್ರಶಸ್ತಿಯಾಗಿ ಯುವ ಮಂಡಳಿಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಹಿರಿಯ ತರಬೇತಿದಾರ ಪ್ರಶಾಂತ್.ಸಿ.ಜೆ, ಚಂದ್ರಶೇಖರ್.ಬಿ.ಸಿ, ಎನ್.ಭೂಲಕ್ಷ್ಮೀ, ಹಿರಿಯ ಸ್ವಯಂಸೇವಕ ಎ.ಎಂ.ರಾಕೇಶ್, ಶ್ರೀಧರ್.ಕೆ, ಮಾಲ, ಸುಮಿತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.