ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್ ಕ್ಲಬ್, ಎನ್‌ಎಸ್‌ಎಸ್ ಸಹಯೋಗದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸ್ ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವ್‌ಗಾಂಧಿ ಜನ್ಮದಿನಾಚರಣೆ ಪ್ರಯಕ್ತ ಸದ್ಭಾವನಾ ದಿನ ಕಾರ್ಯಕ್ರಮ ನಡೆಯಿತು.
ದೇವರಾಜ್ ಅರಸ್ ಹಾಗೂ ರಾಜೀವ್‌ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶ್ರೀದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ, ಹಿಂದುಳಿದ ವರ್ಗಗಳ ಸಮಗ್ರ ಅಭ್ಯುದಯದ ಆಶಯ ಬಿತ್ತುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಅರಸು, ರಾಜೀವ್‌ಗಾಂಧಿ ತಮ್ಮ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ಧತೆಯಿಂದ ದೇಶದ ಭವಿಷ್ಯ ಸದೃಢಗೊಳಿಸಿದ್ದಾರೆ. ಜಾಲಪ್ಪನವರ ರಾಜಕಾರಣದ ದಿಕ್ಕುದೆಸೆಯನ್ನು ಸ್ಪಷ್ಟಗೊಳಿಸಿದ್ದು ದೇವರಾಜ್ ಅರಸ್. ಹೀಗಾಗಿಯೇ ಅವರ ಹೆಸರನ್ನೇ ವಿದ್ಯಾ ಸಂಸ್ಥೆಗೆ ಇಡಲಾಗಿದೆ ಎಂದು ತಿಳಿಸಿದರು.
ಮುಖ್ಯಭಾಷಣ ಮಾಡಿದ ಜಾಲಪ್ಪ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಆರ್.ರವಿಕಿರಣ್, ದೇವರಾಜ ಅರಸ್ ಮುಖ್ಯಮಂತ್ರಿಗಳಾಗಿದ್ದ ವೇಳೆ ‘ಉಳುವವನೇ ಭೂಮಿಯ ಒಡೆಯ‘ ಎಂಬ ಘೋಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್.ಜಿ.ಹಾವನೂರ್ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ, ಪ್ರಬಲ ಸಮುದಾಯಗಳ ನಡುವೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆಯನ್ನು ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅವರದು. ಆರ್.ಎಲ್.ಜಾಲಪ್ಪ ಅವರ ರಾಜಕೀಯ ನಡೆಯಲ್ಲಿ ಅರಸು ಅವರ ಒತ್ತಾಸೆ ಪ್ರಮುಖ ಎಂದರು.
ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ವಿದ್ಯಾ ಸಂಸ್ಥೆಯ ಸದಸ್ಯರಾದ ಎನ್.ತೇಜಸ್ವಿನಿ, ಜೆ.ಆರ್.ರಾಕೇಶ್, ವಿದ್ವತ್, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಡೀನ್ ಡಾ.ಶ್ರೀನಿವಾಸರೆಡ್ಡಿ, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಡಾ.ವಿಜಯ್‌ಕಾರ್ತಿಕ್, ಡಾ.ಗೌರಪ್ಪ, ಡಾ.ನರಸಿಂಹರೆಡ್ಡಿ, ಡಾ.ಚಿಕ್ಕಣ್ಣ, ಮಹಂತೇಶಪ್ಪ, ರವಿಕುಮಾರ್, ಧನಂಜಯ್, ಜಿಯಾವುಲ್ಲಾಖಾನ್, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ವ್ಯವಸ್ಥಾಪಕ ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.