ADVERTISEMENT

ಸಾರಾ ಅಬೂಬಕ್ಕರ್‌ ಕೊಡುಗೆ ಅನನ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:13 IST
Last Updated 11 ಜನವರಿ 2023, 7:13 IST
ದೊಡ್ಡಬಳ್ಳಾಪುರದ ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾರಾ ಅಬೂಬಕ್ಕರ್‌ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು
ದೊಡ್ಡಬಳ್ಳಾಪುರದ ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾರಾ ಅಬೂಬಕ್ಕರ್‌ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು   

ದೊಡ್ಡಬಳ್ಳಾಪುರ: ಕೇರಳದ ಕಾಸರಗೋಡು ಜಿಲ್ಲೆಯ ಸಾರಾ ಅಬೂಬಕ್ಕರ್ ಚಂದ್ರಗಿರಿ ತೀರದಲ್ಲಿ ಕಾದಂಬರಿ ಮೂಲಕ ಮುಸ್ಲಿಂ ಮಹಿಳೆಯರ ಆಂತರಿಕ ಸಂಕಷ್ಟವನ್ನು ಹೊರಜಗತ್ತಿಗೆ ಪರಿಚಯಿಸಿದ ದಿಟ್ಟ ಬರಹಗಾರರಲ್ಲಿ ಪ್ರಮುಖರಾಗಿದ್ದಾರೆ ಎಂದು ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ. ಚಿಕ್ಕಣ್ಣ ಹೇಳಿದರು.

ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಶ್ರೀದೇವರಾಜ ಅರಸ್ ಪ್ರಥಮದರ್ಜೆ ಸಂಜೆ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ನಡೆದ ಸಾಹಿತಿ ಸಾರಾ ಅಬೂಬಕ್ಕರ್‌ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರಾ ಅಬೂಬಕ್ಕರ್ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಓದುಗರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿ ಉಳಿದಿರುವ, ಓದುಗರ ಮನಸ್ಸು ಮರುಗುವಂತೆ ಮಾಡಿರುವ ಬರಹವೆಂದರೆ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತಿಪಾದಿಸುತ್ತಿದ್ದ ಪ್ರಮುಖ ಮುಸ್ಲಿಂ ಲೇಖಕಿಯರಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು.

ADVERTISEMENT

ಅವರು ಶಿವರಾಮ ಕಾರಂತ, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಅವರ ಬರವಣಿಗೆಗೆ ಮಾರುಹೋಗಿ ಸದಾ ಓದಿನಲ್ಲಿ ಮಗ್ನರಾಗಿದ್ದರು. ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಗೌರವ ಸಂದಿವೆ ಎಂದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಕೆ. ದಕ್ಷಿಣಾಮೂರ್ತಿ, ಐಕ್ಯೂಎಸಿ ಸಂಯೋಜಕ ಆರ್. ಉಮೇಶ್, ನಿರ್ವಹಣಾ ವಿಭಾಗದ ಮುಖ್ಯಸ್ಥ ಸಿ.ಪಿ. ಪ್ರಕಾಶ್, ಎನ್.ಎಸ್.ಎಸ್ ಅಧಿಕಾರಿ ಲಕ್ಷ್ಮೀಶ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪಿ. ಚೈತ್ರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣಸ್ವಾಮಿ, ನಂದನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.