ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯದಲ್ಲಿ ಕಾರ್ಖಾನೆಯೊಂದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಯುವಕನೊಬ್ಬ ತನ್ನ ಸ್ನೇಹಿತನ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಶ್ಚಿಮ ಬಂಗಾಲ ಮಂದಿರ ಮಂಡಲ್ (27) ಎಂಬ ಮಹಿಳೆಯನ್ನು ಕೊಲೆ ಮಾಡಿದ ಸುಮನ್ ಮಂಡಲ್(28) ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಂದಿರ ಮಂಡಲ್ ಮತ್ತು ಬಿಜೋನ್ ಮಂಡಲ್ ದಂಪತಿ ಎರಡು ವರ್ಷಗಳ ಹಿಂದೆ ಭೇರ್ಪಟ್ಟಿದ್ದರು. ದಂಪತಿಗೆ ಆರು ವರ್ಷದ ಗಂಡು ಮಗುವಿದೆ.
ಮಂದಿರ ತನ್ನ ಮಗುವಿನೊಂದಿಗೆ ಹೆಬ್ಬಗೋಡಿ ಸಮೀಪದ ತಿರುಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಮಂದಿರ ಪತಿ ಬಿಜೋನ್ ಮತ್ತು ಸುಮನ್ ಎರಡು ವರ್ಷದಿಂದ ಅಂಡಮಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುಮನ್ 15 ದಿನದ ಹಿಂದೆ ಬೆಂಗಳೂರಿಗೆ ಬಂದು ಕಾರ್ಖಾನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ.
ಮಂಗಳವಾರ ರಾತ್ರಿ ಪಾಳಿ ಕೆಲಸಕ್ಕೆಂದು ಹೋದ ಸುಮನ್ ನೇರವಾಗಿ ತಿರುಪಾಳ್ಯದ ಮಂದಿರ ಮಂಡಲ್ ಮನೆಗೆ ಬಂದಿದ್ದಾನೆ. ಏಕಾಏಕಿ ಮನೆಯ ಒಳಗೆ ನುಗ್ಗಿ ಮನೆಯ ಬಾಗಿಲು ಹಾಕಿದ್ದಾನೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಗ ಕೆಲ ಹೊತ್ತಿನ ಬಳಿಕ ಬಾಗಿಲು ಬಡಿದಿದೆ. ಬಾಗಿಲು ತೆಗೆಯದಿದ್ದಾಗ ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ.
ಸ್ಥಳೀಯರು ಕಿಟಕಿಯಲ್ಲಿ ನೋಡಿದಾಗ ಸುಮನ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ. ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ಮಂದಿರ ಮಂಡಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಚಾಕುವಿನಿಂದ ಆಕೆಯ ಕತ್ತು ಸೀಳಿ ಕೊಲೆ ಮಾಡಿದ ಸುಮನ್ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅಕ್ರಮ ಸಂಬಂಧಕ್ಕೆ ಒಪ್ಪದೆ ಇರುವುದರಿಂದ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಎಲೆಕ್ಟ್ರಾನಿಕ್‌ಸಿಟಿ ಡಿಸಿಪಿ ನಾರಾಯಣ್, ಎಸಿಪಿ ಸತೀಶ್, ಇನ್‌ಸ್ಪೆಕ್ಟರ್ ಸೋಮಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆನೇಕಲ್ ತಾಲ್ಲೂಕಿನಲ್ಲಿರುವ ಕೈಗಾರಿಕೆಗಳಲ್ಲಿ ಈಚೆಗೆ ಹೊರರಾಜ್ಯಗಳ ವಲಸಿಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ವಲಸಿಗ ಕಾರ್ಮಿಕರ ಜೊತೆಗೆ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.