ADVERTISEMENT

ಏಳು ಮಂದಿ ಕೊಲೆ ಆರೋಪಿಗಳ ಬಂಧನ

ಅಕ್ಕನನ್ನು ಪ್ರೀತಿಸಿದ್ದಕ್ಕೆ ದೊಣ್ಣೆಗಳಿಂದ ಬಡಿದು ಕೊಲೆ: ತನಿಖೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 3:18 IST
Last Updated 16 ಅಕ್ಟೋಬರ್ 2020, 3:18 IST

ದೊಡ್ಡಬಳ್ಳಾಪುರ:ಅಕ್ಕನನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಪ್ರಜ್ವಲ್‌ ಎಂಬಾತ ಸ್ನೇಹಿತರೊಂದಿಗೆ ಸೇರಿ ಬೆಂಗಳೂರಿನ ವಿಜಯನಗರದ ಪಿ. ಚೇತನ್(20) ಎಂಬಾತನನ್ನು ಕೊಲೆ ಮಾಡಿ ತಾಲ್ಲೂಕಿನ ಹೊನ್ನಾಘಟ್ಟ ಕೆರೆ ಅಂಗಳದ ಗಿಡಗಳ ಪೊದೆಯಲ್ಲಿ ಬಿಸಾಡಿ ಹೋಗಿದ್ದ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ರಾಜಘಟ್ಟ ಗ್ರಾಮದ ಎಸ್‌. ಹೇಮಂತ್‌, ಪಾಲನಜೋಗಿಹಳ್ಳಿಯ ಜಿ.ಟಿ. ತಿಮ್ಮರಾಜು, ಎಂ. ಪ್ರವೀಣ್‌, ಬೆಂಗಳೂರಿನ ಕಾಮಾಕ್ಷಿಪಾಳ್ಯದ ವಾಸೀಪ್‌, ಎಸ್‌. ನಿಖಿಲ್‌, ಶಾರದ ಕಾಲೊನಿಯ ಎಸ್‌. ನವೀನ್ ಮತ್ತು ಮೀನಾಕ್ಷಿನಗರದ ಸಂಜೇಯ್‌ ಬಂಧಿತರು.

‘ಕೆರೆ ಅಂಗಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ದೊರೆತಿತ್ತು. ಆರೋಪಿಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿರಲಿಲ್ಲ. ಆದರೆ, ಬೆಂಗಳೂರಿನ ಅನ್ನಪೂರ್ಣೇಶ್ವರಿಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಬಟ್ಟೆ, ಭಾವಚಿತ್ರದ ಗುರುತಿನ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಬಿ. ನವೀನ್‌ಕುಮಾರ್‌ ತಿಳಿಸಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್‌, ಡಿವೈಎಸ್‌ಪಿ ಟಿ. ರಂಗಪ್ಪ ಅವರ ಮಾರ್ಗದರ್ಶನದಡಿ ತನಿಖೆ ಚುರುಕುಗೊಳಿಸಿ ಕೊಲೆ ನಡೆದ ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಫೇಸ್‌ಬುಕ್ ಕಾಮೆಂಟ್‌ ದ್ವೇಷಕ್ಕೆ ಕಾರಣ:ಚೇತನ್ ಕೊಲೆ ಮೇಲ್ನೋಟಕ್ಕೆ ಪ್ರಜ್ವಲ್‌ ಅವರ ಅಕ್ಕನನ್ನು ಪ್ರೀತಿಸಿ ವಿವಾಹವಾಗಿದ್ದೆ ಪ್ರಮುಖ ಕಾರಣವಾಗಿದೆ. ಆದರೆ ಈ ಕೊಲೆಯ ಸಂಚಿನಲ್ಲಿ ಏಳು ಜನರು ಒಂದಾಗಿರುವುದೇ ಚೇತನ್‌ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಹಾಕಿದ್ದು ಸಹ ಕಾರಣವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.