ದೇವನಹಳ್ಳಿ: ರಾಜ್ಯದಲ್ಲೇ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೋಮವಾರ ಆರಂಭಗೊಂಡ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಆರಂಭವಾಯಿತು. ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಟೌನ್‌ನ 16ನೇ ವಾರ್ಡ್‌ನಲ್ಲಿ ಸಮೀಕ್ಷೆಗೆ ಚಾಲನೆ ನೀಡಿದರು.
ಸಮೀಕ್ಷೆಗಾಗಿ ನೀಯೋಜಿಸಿರುವ ಸಿಬ್ಬಂದಿ ಮೇಲ್ವಿಚಾರಕರ ನೇತೃತ್ವದಲ್ಲಿ ಮನೆ ಮನೆ ಭೇಟಿ ಕೆಲಸ ಆರಂಭಿಸಿದರು.
ಸಮೀಕ್ಷೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಆಯೋಗವು ಸಮೀಕ್ಷೆಯನ್ನು ಸೆ.22 ರಿಂದ ಅ.7 ವರೆಗೆ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಸಮೀಕ್ಷೆಗಾಗಿ 3,286 ಗಣತೀದಾರರನ್ನು 194 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, ಸಮೀಕ್ಷೆ ಸುಗಮವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಧಾರ್ ಕಡ್ಡಾಯ: ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಗಣತಿದಾರರು ಮೊಬೈಲ್ ಆ್ಯಪ್ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಸಾರ್ವಜನಿಕರು ಆಧಾರ್ ಕಾರ್ಡ್ ಇ-ಕೈವೈಸಿ ಕಡ್ಡಾಯವಾಗಿ ಮಾಡಿರಬೇಕು, ಇ-ಕೆವೈಸಿ ಮಾಡಿರುವ ಆಧಾರ್ ಕಾರ್ಡ್ ನ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ ಎಂದರು.
ಇ-ಕೆವೈಸಿ ಮಾಡಿಸದವರು ಹತ್ತಿರದ ಗ್ರಾಮ ಒನ್ ಸೆಂಟರ್‌ಗಳಿಗೆ ಭೇಟಿ ನೀಡಿ ಇ- ಕೆವೈಸಿ ಮಾಡಿಸಿ. ಇದರಿಂದ ಸಮೀಕ್ಷೆಗೆ ದತ್ತಾಂಶ ಸಂಗ್ರಹಿಸಲು ಅನುಕೂಲವಾಗಲಿದೆ. ಗಣತಿದಾರರು ಕೇಳುವಂತಹ ಪ್ರಶ್ನೆಗಳಿಗೆ ಸಾರ್ವಜನಿಕರು ಸರಿಯಾಗಿ ಸಮರ್ಪಕ ಉತ್ತರ ನೀಡಿ ಸಮೀಕ್ಷೆ ಯಶಸ್ಸಿಗೆ ಸಹಕರಿಸಬೇಕು ಎಂದರು.
ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿ, ಜಾತಿ, ಉಪಜಾತಿ, ಕೌಶಲ್ಯ, ಅಗತ್ಯತೆ ಮತ್ತು ಇತರೆ ಸಾಮಾಜಿಕ ಅಂಶ ದಾಖಲಿಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಧಾರ ಸೃಷ್ಟಿಸುವುದು. ಈ ದತ್ತಾಂಶ ಸಂಗ್ರಹಣೆಯು ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷ ರವೀಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜನಪ್ಪ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಲಕ್ಷ್ಮಿಕಾಂತ್, ತಹಶೀಲ್ದಾರ್ ಅನಿಲ್, ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ, ಎಂಜಿನಿಯರ್ ಗಜೇಂದ್ರ ಉಪಸ್ಥಿತರಿದ್ದರು.
ಸಹಾಯವಾಣಿ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿ ಜಿಲ್ಲೆಯಲ್ಲಿ 5 ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿರುತ್ತವೆ. ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿ ದೂರವಾಣಿ ಸಂಖ್ಯೆ 080-22449999 ದೇವನಹಳ್ಳಿ; 9036858653 ದೊಡ್ಡಬಳ್ಳಾಪುರ; 8884579990 ಹೊಸಕೋಟೆ; 080-27931104 ನೆಲಮಂಗಲ; 9740100884.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.