ADVERTISEMENT

ದೇವನಹಳ್ಳಿ | ಅಂಬೇಡ್ಕರ್‌ ಸಮಾನತೆ ಕನಸು ನನಸಾಗಲಿ: ಜಿಲ್ಲಾಧಿಕಾರಿ ಬಸವರಾಜ್‌

ಸಾಮಾಜಿಕ ನ್ಯಾಯ ಅರಿವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 1:56 IST
Last Updated 24 ಜುಲೈ 2025, 1:56 IST
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಡಿವೈಎಸ್‌ಪಿ ರವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ.ಎಲ್‌.ಪ್ರೇಮಾ, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಭಾಗವಹಿಸಿದ್ದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಡಿವೈಎಸ್‌ಪಿ ರವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ.ಎಲ್‌.ಪ್ರೇಮಾ, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಭಾಗವಹಿಸಿದ್ದರು.   

ದೇವನಹಳ್ಳಿ: ಒಂದು ನ್ಯಾಯಸಮ್ಮತ ಸಮಾಜ ಸ್ಥಾಪಿಸಲು ಭಾರತದ ಸಂವಿಧಾನದಲ್ಲಿ ಹಲವಾರು ವಿಧಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಸಮಾಜದ ಬೆಳವಣಿಗೆಯಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ಕಾಣಬಹುದು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜ್‌ ತಿಳಿಸಿದರು.

ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಸಮಾನತೆಯ ಅರಿವು ತಿಳಿದುಕೊಳ್ಳುವುದರಲ್ಲಿ ನಾವೆಲ್ಲ ಹಿಂದೆಯೇ ಉಳಿದಿದ್ದೇವೆ. ಅಂಬೇಡ್ಕರ್ ಅವರು ಹಲವಾರು ದೇಶಗಳನ್ನು ಸುತ್ತಿ ಅಲ್ಲಿನ ಭಾಷೆ, ಕಾನೂನು ವ್ಯವಸ್ಥೆ ಎಲ್ಲಾವನ್ನು ಅಧ್ಯಯನ ಮಾಡಿ ನಮ್ಮ ದೇಶದ ಸಂಸ್ಕೃತಿ, ವ್ಯವಸ್ಥೆ ಎಲ್ಲಾವನ್ನು ಪರಿಗಣಿಸಿ ಸಧೃಡ ಸಂವಿಧಾನ ನೀಡಿದ್ದಾರೆ’ ಎಂದರು.

ADVERTISEMENT

ಹಿಂದಿನ ಕಾಲದಿಂದಲೂ ಅಸಮಾನತೆ ಎನ್ನುವುದು ಬೆಳೆಯುತ್ತಲೇ ಬಂದಿದೆ. ಹಾಗಾಗಿ ನಾವೆಲ್ಲರು ಸಾಮಾಜಿಕ ನ್ಯಾಯದ ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾತ್ರ ಸರ್ವರಿಗೂ ಸಮಾನತೆ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಎಲ್ಲಾ ರೀತಿಯ ಕಾನೂನುಗಳು ಇದ್ದರೂ ಈಗಲೂ ಜಾತಿ ಅಸಮಾನತೆ, ಜಾತಿನಿಂದನೆ ಹಾಗೂ ಸಾಮಾಜಿಕ ಅಸಮಾನತೆ ಸಮಾಜದಲ್ಲಿ ನೆಲಸಿದಿರುವುದು ದುರಂತ. ಯಾವುದೇ ವ್ಯಕ್ತಿಗೆ ಹುಟ್ಟಿನಿಂದ ಸಾವಿನಿವರೆಗೂ ಜಾತಿ, ವರ್ಣ, ಲಿಂಗ, ಧರ್ಮದ ಆಧಾರದ ಮೇಲೆ ಬೇಧ ಭಾವ ಮಾಡಬಾರದು ಎಂದರು.

ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರಿನ ಡಾ.ಬಿ.ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಿವೈಎಸ್ಪಿ ರವಿ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಪ್ರೇಮಾ, ಡಾ.ಬಿ.ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕ ಬಿ.ಎಸ್‌. ಸಚಿನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.