ಆನೇಕಲ್: ತಾಲ್ಲೂಕಿನ ವಿವಿಧೆಡೆ ಶ್ರೀರಾಮನವಮಿಯನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲ್ಲೂಕಿನ ವಿವಿಧೆಡೆ ಅರವಂಟಿಕೆಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಆನೇಕಲ್‌ನ ಗಾಂಧೀವೃತ್ತದಲ್ಲಿನ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ರಾಮನವಮಿ ಮತ್ತು ಕೋದಂಡರಾಮ ಬ್ರಹ್ಮರಥೋತ್ಸವ ನೆರವೇರಿತು. ವಿಶೇಷವಾಗಿ ನಿರ್ಮಿಸಿದ್ದ ಅಲಂಕೃತ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕುರಿಸಿ ರಥವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎಳೆಯಲಾಯಿತು. ಭಕ್ತರು ದವನ, ಬಾಳೆಹಣ್ಣು ಅರ್ಪಿಸುವ ಮೂಲಕ ಹರಕೆ ತೀರಿಸಿದರು.
ರಾಮನವಮಿ ಅಂಗವಾಗಿ ರಾಮ ದೇವರ ಪರಿವಾರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನಿಂದಲೂ ನೂರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ರಾಮದೇವರ ದರ್ಶನ ಪಡೆದು ಪುನೀತರಾದರು.
ರಾಮತಾರಕ ಹೋಮ, ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಕೋದಂಡರಾಮ ಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಏಪ್ರಿಲ್ 6ರಂದು ವಸಂತೋತ್ಸವ ಮತ್ತು ಶಯನೋತ್ಸವ ಆಯೋಜಿಸಲಾಗಿದೆ.
ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯ, ಭಜನೆ ಮನೆ, ಕಲ್ಯಾಣ ಮಂಟಪ, ಬನ್ನೇರುಘಟ್ಟದ ಚಂಪಕಧಾಮ, ಆಂಜನೇಯಸ್ವಾಮಿ, ಸರ್ಜಾಪುರ ಹಾಗೂ ಚಂದಾಪುರದ ಕೋದಂಡರಾಮ, ಮುಗಳೂರಿನ ಬೇಟೆ ವೆಂಕಟರಮಣಸ್ವಾಮಿ, ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರಸ್ವಾಮಿ, ಬಿದರಗುಪ್ಪೆ ಹಾಗೂ ಬಳ್ಳೂರಿನ ಲಕ್ಷ್ಮಿ ನಾರಾಯಣಸ್ವಾಮಿ, ಕೊಪ್ಪ ಕೋದಂಡರಾಮಸ್ವಾಮಿ, ನಿರ್ಮಾಣ್ ಬಡಾವಣೆಯ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾಮನವಮಿ ಪ್ರಯುಕ್ತ ಅರವಂಟಿಕೆಗಳನ್ನು ಸ್ಥಾಪಿಸಲಾಗಿತ್ತು. ಶ್ರೀರಾಮ ದೇವಾಲಯ, ಹನುಮಂತ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳನ್ನು ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಪಟ್ಟಣದ ಬಸ್ ನಿಲ್ದಾಣ ಸಮೀಪದ ಭಜನೆ ಮನೆಯಲ್ಲಿ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗಿನಿಂದಲೂ ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಶಂಕರಚಾರ್ಯ ಆಶ್ರಮದಲ್ಲಿ ರಾಮನವಮಿ: ತಾಲ್ಲೂಕಿನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿನೀರು ಕುಂಟೆ ಕೆಂಪುದೊಡ್ಡಮ್ಮಸಂದ್ರದ ಶಂಕರಾಚಾರ್ಯರ ಆಶ್ರಮದಲ್ಲಿ ಶ್ರೀರಾಮನವಮಿಯನ್ನು ಆಯೋಜಿಸಲಾಗಿತ್ತು.
ರಾಮನವಮಿ ಪ್ರಯುಕ್ತ ಗಣಪತಿ ಹೋಮ, ನವಗ್ರಹ ಹೋಮ ನಡೆಯಿತು. ಸಂಜೆ ಶ್ರೀರಾಮ ಪಟ್ಟಾಭಿಷೇಕ ಮತ್ತು ಸಂಗೀತ ಕಚೇರಿ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.