ADVERTISEMENT

ಯುವ ಸಮುದಾಯ ಕೆಟ್ಟ ಹವ್ಯಾಸ ತ್ಯಜಿಸಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:37 IST
Last Updated 4 ನವೆಂಬರ್ 2019, 14:37 IST
ಕ್ರೀಡಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು.   

ದೇವನಹಳ್ಳಿ: ಯುವ ಸಮುದಾಯ ಕೆಟ್ಟ ಹವ್ಯಾಸದಿಂದ ಹೊರಬರಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಕ್ರೀಡಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಸಮುದಾಯಕ್ಕೆ ಕಾಲೇಜು ವ್ಯಾಸಂಗದ ಹೊರಗುಳಿದಿರುವ ಅರ್ಹರಿಗೆ ವಿವಿಧ ಕ್ರೀಡಾ ಪರಿಕರ ನೀಡುತ್ತಿದೆ. ಯುವಸಮುದಾಯ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿ ಮುಂದುವರಿಯಬೇಕು. ಆರೋಗ್ಯಯುತ ಸಮಾಜ ನಿರ್ಮಾಣವಾಗಬೇಕು. ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಭವಿಷ್ಯದ ಬದುಕು ರೂಪಿಸಿಕೊಳ್ಳುವ ಉದ್ದೇಶದಿಂದ ಪ್ರೋತ್ಸಾಹದಾಯಕ ಯೋಜನೆಗಳ ಮೂಲಕ ಸಹಕಾರ ನೀಡುತ್ತಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಿನಾರಾಯಣಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಸಕ್ತರಿಗೆ ಕೊರತೆ ಇಲ್ಲ, ಆರ್ಥಿಕ ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಕನಿಷ್ಠ ಒಂದು ಕ್ರಿಕೆಟ್ ಬ್ಯಾಟ್ ಖರೀದಿಸಲು ಪರದಾಡಬೇಕಾದ ಸ್ಥಿತಿ ಇದೆ. ಪಿಯುಸಿ ಮತ್ತು ಪದವಿ ಮುಗಿಸಿದ ನಂತರ ಹೆಚ್ಚಿನ ವ್ಯಾಸಂಗ ಮಾಡಲು ಸಾಧ್ಯವಿಲ್ಲದ ಅನೇಕ ಯುವಕ ಯುವತಿಯರು ಉದ್ಯೋಗವಿಲ್ಲದೆ ಮನೆಯಲ್ಲಿರಬೇಕಾದ ಸ್ಥಿತಿ ಇದೆ. ಉದ್ಯೋಗ ಸಿಗುವವರೆಗೂ ಇಲಾಖೆ ನೀಡುತ್ತಿರುವ ಕ್ರೀಡಾ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಕ್ರೀಡಾ ಚಟುವಟಿಕೆ ನಿರಂತರವಾದರೆ ದೈನಂದಿನ ಚಟುವಟಿಕೆಗಳು ಚುರುಕು ಪಡೆದುಕೊಂಡು ಮಾನಸಿಕ ಮತ್ತು ದೈಹಿಕ ಜಡತ್ವ ನಿವಾರಣೆಗೆ ಸಹಕಾರಿ. ಕ್ರೀಡೆಗಳು ಮೌಲ್ಯಯುತ ಸಮಾಜ ಕಟ್ಟಲು ಮತ್ತು ಸಾಮೂಹಿಕ ಸಹಭಾಗಿತ್ವ ಮೂಡಿಸಲು ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವಕಾಂಗ್ರೆಸ್ ಘಟಕ ಅಧ್ಯಕ್ಷ ಮಾರುತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಆರ್.ಗೀತಾ ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕಿನ 28 ಪ್ರಗತಿಪರ ಕ್ರೀಡಾ ಸಂಘಗಳ ಯುವಕ ಮತ್ತು ಯುವತಿಯರಿಗೆ ಹ್ಯಾಂಡ್ ಬಾಲ್, ಥ್ರೋಬಾಲ್, ಕ್ರಿಕೆಟ್ ಪರಿಕರ,ಕೇರಂ ಹಾಗೂ ಇತರ ಸಾಮಗ್ರಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.