ADVERTISEMENT

ಮೂಲ ಸೌಲಭ್ಯಕ್ಕಾಗಿ ಹೋರಾಟ ಅನಿವಾರ್ಯ

ದಲಿತ ಸಂಘರ್ಷ ಸಮಿತಿ (ಭೀಮ್ ಶಕ್ತಿ) ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 13:19 IST
Last Updated 15 ಜುಲೈ 2019, 13:19 IST
ನೇಮಕಗೊಂಡ ನೂತನ  ಪದಾಧಿಕಾರಿಗಳು 
ನೇಮಕಗೊಂಡ ನೂತನ  ಪದಾಧಿಕಾರಿಗಳು    

ದೇವನಹಳ್ಳಿ: ‘ಅವಕಾಶ ವಂಚಿತರಿಗೆ ಮೂಲ ಸೌಲಭ್ಯಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯ’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ಕಾರಹಳ್ಳಿ ಕೆಂಪಣ್ಣ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ (ಭೀಮ್ ಶಕ್ತಿ) ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ‘ಸಂಘಟನೆ ತನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದೆ. ಇತರ ಸಂಘಟನೆಗಳಿಗಿಂತ ಭಿನ್ನವಾದ ನೀತಿ ನಿಯಮಗಳಿವೆ. ಯಾವುದೇ ಕಾರಣಕ್ಕೂ ನೂತನ ಪದಾಧಿಕಾರಿಗಳು ಸಮಿತಿಗೆ ಕಪ್ಪು ಚುಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಆನೇಕ ಅನಕ್ಷರಸ್ಥರಿದ್ದಾರೆ. ವಿವಿಧ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಅರಿವು ಇರುವುದಿಲ್ಲ. ವಸತಿ ನಿವೇಶನ ವೃದ್ಧಾಪ್ಯ ವೇತನ, ವಿಧವೆ ಮತ್ತು ಅಂಗವಿಕಲರಿಗೆ ನೀಡುವ ಸಾಮಾಜಿಕ ಭದ್ರತೆಯ ಪ್ರೋತ್ಸಾಹ ಧನ, ಗ್ರಾಮೀಣ ಕಸಬುದಾರರಿಗೆ ವೃತ್ತಿ ಪ್ರೋತ್ಸಾಹ ಪರಿಕರ, ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸಿ ಅನೇಕ ರೀತಿಯ ಸೌಲಭ್ಯಗಳನ್ನು ಆರ್ಹರಿಗೆ ನಾವು ಗುರುತಿಸಿ ಕೊಡಿಸಬೇಕು. ಅದೊಂದು ಸಮಾಜ ಸೇವೆ’ ಎಂದು ಹೇಳಿದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಆರ್ಹರನ್ನು ಗುರುತಿಸಬೇಕು. ಜೊತೆಗೆ ಅಲ್ಲೊಂದು ಗ್ರಾಮ ಶಾಖೆಯನ್ನು ಆರಂಭಿಸಬೇಕು, ಸಂಘಟನೆ ಬಲಪಡಿಸಬೇಕು. ಪರಿಶಿಷ್ಟರ ಸಮಸ್ಯೆಗಳಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಸರ್ಕಾರದ ಆದೇಶದಂತೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಇದುವರೆಗೆ ನಡೆಸಿಲ್ಲ ಇದರ ಬಗ್ಗೆ ಒತ್ತಡ ತರಬೇಕಾಗಿದೆ ಎಂದು ಹೇಳಿದರು.

ಸಮಿತಿ ರಾಜ್ಯ ಕಾರ್ಯದರ್ಶಿ ಮುರುಳಿ ಮತ್ತು ಮುನಿರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ ಆನೇಕ ಕಡೆ ರಾಜಕಾಲುವೆ, ಭೂ ಕಬಳಿಕೆ, ಗೋಮಾಳ ಒತ್ತುವರಿಯಾಗಿದೆ. ಕೊಟ್ಯಂತರ ಬೆಲೆಯ ಸರ್ಕಾರದ ಸ್ವತ್ತು ಭೂ ಮಾಫಿಯಾಗಳ ಕೈಯಲ್ಲಿದೆ. ಇದರ ಬಗ್ಗೆ ಹೋರಾಟ ನಡೆಸಬೇಕು’ ಎಂದು ಹೇಳಿದರು.

ಸಮಿತಿ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಾತನಾಡಿದರು. ಸಮಿತಿ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಕಾರ್ಯದರ್ಶಿ ಸಾದಿಕ್ ಪಾಷ , ಉಪಾಧ್ಯಕ್ಷ ಮಹಬೂಬ್ ಪಾಷ, ಮುಖಂಡರಾದ ಶಿವಕುಮಾರ್, ಶಶಿಕಲಾ ಇದ್ದರು.

ನೂತನ ಪದಾಧಿಕಾರಿಗಳು: ಮಹಿಳಾ ಘಟಕ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್ ಅಂಜಲಿ, ಕಸಬಾ ಹೋಬಳಿ ಘಟಕ ಅಧ್ಯಕ್ಷ ಶ್ರೀನಿವಾಸ್ , ಚನ್ನರಾಯಪಟ್ಟಣ ಹೋಬಳಿ ಘಟಕ ಗೌರವಾಧ್ಯಕ್ಷ ಪೂಜಪ್ಪ, ಅಲ್ಪಸಂಖ್ಯಾತ ಘಟಕ ತಾಲ್ಲೂಕು ಉಪಾಧ್ಯಕ್ಷ ಸಯ್ಯದ್, ಗೌರವಾಧ್ಯಕ್ಷ ಸಯ್ಯದ್ ಶೋಯಿಬ್, ಪ್ರಧಾನ ಕಾರ್ಯದರ್ಶಿ ಸಯ್ಯದ್ ಎಜಾಜ್ ಪಾಷ, ಕಾರ್ಯದರ್ಶಿ ಸಾದಿಕ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.