ADVERTISEMENT

‘ಗುರುವಿಗೆ ವಿದ್ಯಾರ್ಥಿಗಳು ಕೃತಜ್ಞರಾಗಿರಿ‌’

ಶಿವಾಚಾರ್ಯ ವೈಶ್ಯ ನಗರ್ತ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 13:29 IST
Last Updated 11 ಆಗಸ್ಟ್ 2019, 13:29 IST
ನಗರ್ತ ಸಂಘದ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ನಗರ್ತ ಸಂಘದ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು   

ದೇವನಹಳ್ಳಿ: ‘ವಿದ್ಯೆ ಕಲಿಸಿದ ಗುರುಗಳ ಬಗ್ಗೆ ಮಕ್ಕಳು ಕೃತಜ್ಞತೆ ಇಟ್ಟುಕೊಳ್ಳಬೇಕು’ ಎಂದು ನಗರ್ತ ಸಮುದಾದಯದ ಹಿರಿಯ ಮುಖಂಡ ಪಿ.ರುದ್ರಪ್ಪ ಹೇಳಿದರು.

ಇಲ್ಲಿನ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಅಯೋಧ್ಯಾ ನಗರದ ಶಿವಾಚಾರ್ಯ ವೈಶ್ಯ ನಗರ್ತ ಸಮಿತಿ, ನಗರ್ತ ಯುವಕ ಸಂಘ ಮತ್ತು ನಗರ್ತ ಮಹಿಳಾ ಸಂಘ ಸಹಭಾಗಿತ್ವದಲ್ಲಿ ನಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ 16 ಸಾವಿರ ನಗರ್ತ ಕುಟುಂಬಗಳಿವೆ, ಈ ಪೈಕಿ 6 ಸಾವಿರ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಪ್ರತಿಯೊಂದು ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ವಂಚಿತರಾಗಬಾರದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಗರ್ತ ಸಂಘ ದಶಕದ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಹೇಳಿದರು.

ADVERTISEMENT

‘ಬದುಕಿನಲ್ಲಿ ಕತ್ತಲೆ ಕಾಣುತ್ತಿದ್ದೇವೆ. ಜ್ಞಾನದ ಬೆಳಕಿನ ಅರಿವು ತಿಳಿದುಕೊಳ್ಳಬೇಕು ಸಮಾಜಕ್ಕೆ ಉಳಿತು ಮಾಡುವವರು ಬೇಕಾಗಿದೆ. ಇನ್ನೊಬ್ಬರ ಮೇಲೆ ದ್ವೇಷ ಅಸೂಯೆ ಸಲ್ಲದು. ನಗರ್ತ ಸಮುದಾಯಕ್ಕೆ ಸಮಾಜದಲ್ಲಿ ವಿಶೇಷ ಗೌರವವಿದೆ. ಮುಂದುವರಿಸುವ ಜವಬ್ದಾರಿ ಯುವಸಮುದಾಯದ ಮೇಲಿದೆ. ಗುರುಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ನಗರ್ತ ಸಮಿತಿ ನಿರ್ದೇಶಕ ತುಪ್ಪದ ಚಿಕ್ಕವೀರ ಭದ್ರಪ್ಪ ಮಾತನಾಡಿ, ‘ಸಮುದಾಯದ ಪ್ರಗತಿಗಾಗಿ ತ್ಯಾಗ ಮಾಡಿದ ಅನೇಕ ಮಹನೀಯರು ಕೆಲವರು ಇಲ್ಲ. ಕೆಲವರು ಇದ್ದಾರೆ. ನೆನಪಿಸುವ ಕೆಲಸ ಮಾಡಬೇಕು.ನಾಲ್ಕುಬಾರಿ ಪುರಸಭೆ ಸದಸ್ಯರಾಗಿ ಪವಾಡ ಬಸವಣ್ಣ ದೇವಾಲಯದ ನಿರ್ಮಾಣದ ರೂವಾರಿ ವೈ.ಸಿ.ಸತೀಶ್ ರವರ ಕೊಡುಗೆ ಅಮೂಲ್ಯ, ಸಮುದಾಯದಲ್ಲಿ ವೃದ್ಧಾಶ್ರಮ ತೆರೆಯುವ ಬಯಕೆ ಇದೆ’ ಎಂದು ಹೇಳಿದರು.

ಪುರಸಭೆ ಸದಸ್ಯ ವೈ.ಸಿ.ಸತೀಶ್, ಮುಖಂಡ ಜಯಕುಮಾರ್ ಮಾತನಾಡಿದರು.

ನಗರ್ತ ಸಂಘ ಅಧ್ಯಕ್ಷ ಎಸ್.ರಮೇಶ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರಾದ ಮಾನಸ, ವಿನುತಾ, ನಗರ್ತ ಸಂಘ ಮಹಿಳಾ ಘಟಕ ಉಪಾಧ್ಯಕ್ಷೆ ಗೀತಾ ಜಗದೇವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.