ADVERTISEMENT

ಸಿಎ ಆರ್‌ ನಿಧಿ ಸದ್ಬಳಕೆಗೆ ಸಲಹೆ

ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ಭೌತಿಕ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:33 IST
Last Updated 1 ಜುಲೈ 2022, 2:33 IST
ದೊಡ್ಡಬಳ್ಳಾಪುರದ ಸರ್ಕಾರಿ ಉರ್ದು ಪ್ರಾಥಮಿಕ ಪಾಠ ಶಾಲೆಯಲ್ಲಿ ಗುರುವಾರ ನಡೆದ ಯುನಿಲೆಟ್ ಕಂಪನಿಯ ಶಾಲೆಗಳ ಭೌತಿಕ ಸೌಲಭ್ಯ ವಿತರಣಾ ಸಮಾರಂಭವನ್ನು ಶಾಸಕ ಟಿ. ವೆಂಕಟರಮಣಯ್ಯ ಉದ್ಘಾಟಿಸಿದರು
ದೊಡ್ಡಬಳ್ಳಾಪುರದ ಸರ್ಕಾರಿ ಉರ್ದು ಪ್ರಾಥಮಿಕ ಪಾಠ ಶಾಲೆಯಲ್ಲಿ ಗುರುವಾರ ನಡೆದ ಯುನಿಲೆಟ್ ಕಂಪನಿಯ ಶಾಲೆಗಳ ಭೌತಿಕ ಸೌಲಭ್ಯ ವಿತರಣಾ ಸಮಾರಂಭವನ್ನು ಶಾಸಕ ಟಿ. ವೆಂಕಟರಮಣಯ್ಯ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ:‘ಕಂಪನಿಗಳು ಸಾಮಾಜಿಕ ಜವಾಬ್ದಾರಿ ನಿಧಿಯಡಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುನ್ನಡೆಯಬೇಕಿದೆ’ ಎಂದು ಶಾಸಕ ಟಿ. ವೆಂಕಟರಮಣಯ್ಯ ಕಿವಿಮಾತು ಹೇಳಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆಯ ಸರ್ಕಾರಿ ಉರ್ದು ಪ್ರಾಥಮಿಕ ಪಾಠ ಶಾಲೆಯಲ್ಲಿ ಗುರುವಾರ ಯುನಿಲೆಟ್ ಕಂಪನಿಯ ಸಿಎಸ್‌ ಆರ್ ನುದಾನದಡಿ ನೀಡಲಾಗುತ್ತಿರುವ ಶಾಲೆಗಳ ಭೌತಿಕ ಸೌಲಭ್ಯಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಅವರು ಕೇಂದ್ರದ ಕಂಪನಿ ವ್ಯವಹಾರಗಳ ಸಚಿವರಾಗಿದ್ದಾಗ ಜಾರಿಗೆ ತಂದಿದ್ದ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯಡಿ ವಿವಿಧ ಸಾಮಾಜಿಕ ಸೇವೆ ಕೈಗೊಳ್ಳಬೇಕು ಎನ್ನುವ ನಿಯಮದಿಂದ ತಾಲ್ಲೂಕಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಸೇವಾ ಕಾರ್ಯಗಳಾಗಿವೆ. ವಿವಿಧ ಸೌಲಭ್ಯಗಳು ಸಿಗುತ್ತಿವೆ ಎಂದು ಹೇಳಿದರು.

ADVERTISEMENT

ಯುನಿಲೆಟ್ ಕಂಪನಿಯು ಶಾಲೆಗಳ ಉನ್ನತೀಕರಣದ ಧ್ಯೇಯ ಹೊಂದುವ ಮೂಲಕ ಹಲವಾರು ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಂಗಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಂಪನಿಗಳ ಸಿಎಸ್‌ ಆರ್ ನಿಧಿ ಹಾಗೂ ಸಮುದಾಯದ ಸಹಕಾರದಿಂದ ಹಲವಾರು ಸೌಲಭ್ಯಗಳು ದೊರೆಯುತ್ತಿವೆ.ಕಂಪನಿಗಳು ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕಿದೆ ಎಂದು ಮನವಿ ಮಾಡಿದರು.

ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಕಲಿಕೆ ಸಹ ಅಗತ್ಯವಾಗಿದೆ. ಇಲ್ಲಿನ ಸರ್ಕಾರಿ ಉರ್ದು ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಬೋಧಿಸಲಾಗುತ್ತಿದೆ. ಪೋಷಕರು ವಿದ್ಯಾರ್ಥಿಗಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲಿಸಬೇಕು ಎಂದು ಕೋರಿದರು.

ಯುನಿಲೆಟ್ ಕಂಪನಿಯ ಸಿಇಒ ಮುರಳಿಕೃಷ್ಣ ಮಾತನಾಡಿ, ಕಂಪನಿಯಿಂದ ದೊಡ್ಡಬಳ್ಳಾಪುರದ ವಿನಾಯಕನಗರ, ರೋಜಿಪುರದ ಉರ್ದು ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಇದರಲ್ಲಿ ಶಾಲೆಯ ನವೀಕರಣ, ಆಧುನಿಕ ತರಗತಿಯ ಕೊಠಡಿ ನಿರ್ಮಾಣ, ಕಂಪ್ಯೂಟರ್ ಮತ್ತು ಪ್ರಿಂಟರ್, ವಾಟರ್ ಪ್ಯೂರಿಪೈಯರ್, ಸ್ಕೂಲ್ ಬ್ಯಾಗ್ ಹಾಗೂ ನೋಟ್‌ ಬುಕ್‌ ನೀಡಲಾಗುತ್ತಿದೆ ಎಂದು ತಿಳಿಸಿದರು.

ಯುನಿಲೆಟ್ ಅಪ್ಲೈಯನ್ಸ್ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹುಮಾಯುನ್ ಫೈಯಾಜ್ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಗರಸಭಾ ಸದಸ್ಯೆ ರೂಪಿಣಿ ಮಂಜುನಾಥ್, ರಜನಿ ಸುಬ್ರಹ್ಮಣ್ಯ, ಮಂಜುಳಾ ರಮೇಶ್, ನಾಗರಾಜ್, ಆನಂದ್, ಅಲ್ತಾಫ್, ಚಂದ್ರಮೋಹನ್, ಎಸ್‍ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್, ಮುಖ್ಯಶಿಕ್ಷಕಿ ಶಮಿನಾ ಬೇಗಂ, ಕಂಪನಿಯ ಸಿಬ್ಬಂದಿ ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.