ADVERTISEMENT

ಬಿಸಿಲಿನ ತಾಪ: ರೇಷ್ಮೆಹುಳು ಸಾಕಾಣಿಕೆಗೆ ಪೆಟ್ಟು

ರೇಷ್ಮೆಕೃಷಿಯಿಂದ ವಿಮುಖರಾಗುತ್ತಿರುವ ರೈತರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 13:45 IST
Last Updated 8 ಏಪ್ರಿಲ್ 2024, 13:45 IST
ರೇಷ್ಮೆಹುಳು (ಸಾಂಧರ್ಭಿಕ ಚಿತ್ರ).
ರೇಷ್ಮೆಹುಳು (ಸಾಂಧರ್ಭಿಕ ಚಿತ್ರ).   

ವಿಜಯಪುರ(ದೇವನಹಳ್ಳಿ): ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೇಷ್ಮೆಹುಳು ಸಾಕಾಣಿಕೆಗೆ ಪೆಟ್ಟು ಬಿದ್ದಿದೆ.

36–36 ಡಿಗ್ರಿ ತಾಪಮಾನದಲ್ಲಿ ರೇಷ್ಮೆ ಹುಳು ರಕ್ಷಣೆ ಸವಾಲಿನ ಕೆಲಸವಾಗಿದ್ದು, ಹುಳು ಸಾಕಾಣಿಕೆಗೆ ತಂಪಾದ ವಾತಾವರಣ ಕಲ್ಪಿಸಲು ಸಾಕಣಿಕೆದಾರರು ಪರದಾಡುತ್ತಿದ್ದಾರೆ. ಕೆಲವರು ಸದ್ಯಕ್ಕೆ ಇದರ ಸಹವಾಸವೇ ಬೇಡವೆಂದು ರೇಷ್ಮೆ ಕೃಷಿಯಿಂದ ದೂರ ಉಳಿಯುತ್ತಿದ್ದಾರೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 3,200 ಮಂದಿ ರೇಷ್ಮೆ ಬೆಳೆಗಾರರು ನೋಂದಾಯಿಸಿಕೊಂಡಿದ್ದಾರೆ. ಈಗ ಬೇರೆ ಬೇರೆ ಕಾರಣಗಳಿಂದ ಸುಮಾರು 120 ಹೆಚ್ಚು ಮಂದಿ ರೈತರು ರೇಷ್ಮೆ ಕೃಷಿ ಮಾಡುತ್ತಿದ್ದದಾರೆ ಎಂದು ದೇವನಹಳ್ಳಿ ರೇಷ್ಮೆ ವಿಸ್ತರಣಾಧಿಕಾರಿ ನರೇಂದ್ರಬಾಬು ತಿಳಿಸಿದರು.

ADVERTISEMENT

ರೇಷ್ಮೆಹುಳು ಸಾಕಣಿಕೆಗೆ ಉಷ್ಣಾಂಶ 25 ಡಿಗ್ರಿಯಷ್ಟು ಇರಬೇಕು. ತೇವಾಂಶ 60 ಡಿಗ್ರಿಯಷ್ಟಿರಬೇಕು. ಆದರೆ, ದಿನದಿಂದ ದಿನಕ್ಕೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಲೇ ಇದೆ. ಹುಳು ಸಾಕಾಣಿಕೆ ಮನೆಗಳ ಸುತ್ತಲೂ ನೆಟ್ ಕಟ್ಟಿದರೂ ಬಿಸಿಗಾಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಗೋಣಿಚೀಲಗಳನ್ನು ಕಟ್ಟಿ, ಅರ್ಧಗಂಟೆಗೊಮ್ಮೆ ನೀರು ಹಾಕುತ್ತಿದ್ದೇವೆ. ಆದರೂ ಕಷ್ಟವಾಗುತ್ತಿದೆ ಎಂದು ಸಾಕಣಿಕೆದಾರರು ಅಳಲು ತೋಡಿಕೊಂಡಿದ್ದಾರೆ.

ಬೆಳಗ್ಗೆ ಕಟಾವು ಮಾಡಿಕೊಂಡು ಬಂದಿರುವ ಹಿಪ್ಪುನೇರಳೆ ಸೊಪ್ಪು ಸಂಜೆಯೊಳಗೆ ಎಲೆಗಳು ಮುದುಡಿಕೊಳ್ಳುತ್ತಿವೆ ಎನ್ನುತ್ತಾರೆ ಅವರು.

100 ಮೊಟ್ಟೆ ರೇಷ್ಮೆಹುಳುವಿಗೆ (2 ಜ್ವರವೆದ್ದಿರುವ ಹುಳು) ₹6 ಸಾವಿರ ಕೊಡಬೇಕು. 100 ಮೊಟ್ಟೆ ಹುಳು ಹಣ್ಣಾಗುವಷ್ಟರಲ್ಲಿ ಔಷಧಿಗಳು, ಕೂಲಿ ಎಲ್ಲಾ ಸೇರಿ ಸರಾಸರಿ ₹35 ಸಾವಿರ ಖರ್ಚಾಗುತ್ತದೆ.

100 ಮೊಟ್ಟೆಗೆ ಉತ್ತಮ ಇಳುವರಿ ಸಿಗಬೇಕಾದರೆ 100 ಕೆ.ಜಿ. ಗೂಡ ಬರಬೇಕು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೂಡು 400 ರೂಪಾಯಿಗೆ ಹರಾಜಾಗುತ್ತಿದೆ. ತಿಂಗಳು ಪೂರ್ತಿ ಮನೆಯವರೆಲ್ಲರೂ ದುಡಿಯಬೇಕು. ಅದರಲ್ಲಿ ತಿಂಗಳಿಗೆ ಖರ್ಚು ಕಳೆದು ಸಿಗುವುದು ಕೇವಲ ₹4-5 ಸಾವಿರ ಮಾತ್ರ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇದರ ಬದಲು ಬೇರೆ ಉದ್ಯೋಗ ಹುಡುಕುವ ಚಿಂತನೆಯಲ್ಲಿ ರೇಷ್ಮೆ ಕೃಷಿಕರು.

ರೇಷ್ಮೆಗೂಡು ಬೆಳೆದು ಚಂದ್ರಿಕೆಯಿಂದ ಬಿಡಿಸಿದ ಕೂಡಲೇ ಮಾರುಕಟ್ಟೆಗೆ ಸಾಗಾಣಿಕೆ ಮಾಡಬೇಕು. ಇಲ್ಲವಾದರೆ, ಬಿಸಿಲಿನ ತಾಪಕ್ಕೆ ಗೂಡಿನ ತೇವಾಂಶವೆಲ್ಲಾ ಹೀರಿಕೊಂಡು, ತೂಕ ಕಡಿಮೆ ಆಗುತ್ತದೆ. 100 ಕೆ.ಜಿ.ಬರಬೇಕಾಗಿರುವ ಗೂಡು 80 ಕೆ.ಜಿಗೆ ಇಳಿಕೆಯಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಸಾಕಣಿಕೆಯಲ್ಲಿ ನಿಲ್ಲಿಸುತ್ತಿದ್ದೇವೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.