ADVERTISEMENT

ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆ ನಿಗದಿಗೆ ಆಗ್ರಹ

ದೊಡ್ಡಬಳ್ಳಾಪುರದಲ್ಲಿ ನಾಳೆಯಿಂದ ರೈತ ಅಧ್ಯಯನ ಶಿಬಿರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 14:11 IST
Last Updated 8 ಜೂನ್ 2019, 14:11 IST
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಸಿ.ಬಯ್ಯಾರೆಡ್ಡಿ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಸಿ.ಬಯ್ಯಾರೆಡ್ಡಿ ಮಾತನಾಡಿದರು   

ದೊಡ್ಡಬಳ್ಳಾಪುರ: ‘ರೈತರ ಸಮಸ್ಯೆಗಳ ಅಧ್ಯಯನ ಮತ್ತು ಜಾಗೃತಿ ಮೂಡಿಸುವ ದಿಸೆಯಲ್ಲಿ ಜೂನ್ 10 ರಿಂದ ಮೂರು ದಿನಗಳ ರಾಜ್ಯ ಮಟ್ಟದ ರೈತ ಅಧ್ಯಯನ ಶಿಬಿರವನ್ನು ನಗರದ ಬೆಸೆಂಟ್‌ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ದೇಶದಲ್ಲಿ ಕೃಷಿ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆ ತಡೆ, ಸ್ವಾಮಿನಾಥನ್ ವರದಿ ಜಾರಿ, ಭೂ ಸ್ವಾಧೀನ ನೀತಿ ವಿರುದ್ಧ ಹೋರಾಟ ಮೊದಲಾಗಿ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಚಿಂತಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು.

‘ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಪರಿಣಾಮವಾಗಿ ಸುಮಾರು 3.7 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಲ್ಲಿ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಅನ್ವಯ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭ ಸೇರಿಸಿ, ಎಲ್ಲ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನು ಜಾರಿಯಾಗಬೇಕು. ಈ ವಿಚಾರಗಳ ಕುರಿತ ಚರ್ಚೆ ಅಧ್ಯಯನ ಶಿಬಿರದಲ್ಲಿ ನಡೆಯಲಿದೆ’ ಎಂದು ಹೇಳಿದರು.

ADVERTISEMENT

ರಾಜ್ಯ ಮಟ್ಟದ ರೈತ ಅಧ್ಯಯನ ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ನಾಗರಾಜಗೌಡ, ಪ್ರಧಾನ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಅಧ್ಯಯನ ಶಿಬಿರದ ಆಯೋಜನೆ ಕುರಿತು ಮಾಹಿತಿ ನೀಡಿ ‘ರಾಜ್ಯದ ವಿವಿಧೆಡೆಗಳಿಂದ 350ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶಿಬಿರವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸ್ವಾಗತ ಸಮಿತಿ ರಚಿಸಲಾಗಿದೆ’ ಎಂದರು.

‘10 ರಂದು ಬೆಳಿಗ್ಗೆ 10.30ಕ್ಕೆ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಡಾ.ಅಶೋಕ್ ದವಳೆ ಶಿಬಿರ ಉದ್ಘಾಟಿಸಲಿದ್ದಾರೆ. ಜಂಟಿ ಕಾರ್ಯದರ್ಶಿ ವಿಜುಕೃಷ್ಣನ್ ತರಬೇತಿ ನೀಡಲಿದ್ದಾರೆ. ಬಿ.ಸಿ.ಬಯ್ಯಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಪಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು, ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಭಾಗವಹಿಸಲಿದ್ದಾರೆ. ರೈತರ ಪ್ರಚಲಿತ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ, ಸಂವಾದ ನಡೆಯಲಿದೆ’ ಎಂದು ಪದಾಧಿಕಾರಿಗಳು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ, ಮುಖಂಡರಾದ ವಿಜಯಕುಮಾರ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.