ADVERTISEMENT

ಕೋವಿಡ್‌ ಕೇರ್‌ ಸೆಂಟರ್‌ಗೆ ತಹಶೀಲ್ದಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:37 IST
Last Updated 18 ಜೂನ್ 2021, 4:37 IST
ದೇವನಹಳ್ಳಿ ತಾಲ್ಲೂಕಿನ ಕುಂದಾಣದ ಕೋವಿಡ್ ಕೇರ್ ಸೆಂಟರ್‌ನ ಅಡುಗೆ ಕೊಠಡಿಗೆ ತಹಶೀಲ್ದಾರ್ ಅನಿಲ್‍ಕುಮಾರ್ ಅರೋಲಿಕರ್ ಭೇಟಿ ನೀಡಿ ಪರಿಶೀಲಿಸಿದರು
ದೇವನಹಳ್ಳಿ ತಾಲ್ಲೂಕಿನ ಕುಂದಾಣದ ಕೋವಿಡ್ ಕೇರ್ ಸೆಂಟರ್‌ನ ಅಡುಗೆ ಕೊಠಡಿಗೆ ತಹಶೀಲ್ದಾರ್ ಅನಿಲ್‍ಕುಮಾರ್ ಅರೋಲಿಕರ್ ಭೇಟಿ ನೀಡಿ ಪರಿಶೀಲಿಸಿದರು   

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಭೇಟಿ ನೀಡಿ ಅಡುಗೆ ಕೊಠಡಿ ಮತ್ತು ಸೋಂಕಿತರಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಸೋಂಕಿತರಿಗೆ ಚಿಕಿತ್ಸೆ ಮತ್ತು ಸೇವೆಯಲ್ಲಿ ಈ ಸೆಂಟರ್ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪಾಸಿಟಿವ್ ಬಂದಂತಹ ರೋಗಿಗಳಿಗೆ 11-14 ದಿನಗಳವರೆಗೆ ಇಲ್ಲಿಯೇ ಇರಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು
ಹೇಳಿದರು.

ಒಂದು ವೇಳೆ ಉಸಿರಾಟದ ತೊಂದರೆ ಇದ್ದಲ್ಲಿ ಇಲ್ಲಿಯೇ ಆಮ್ಲಜನಕ ಸಾಂದ್ರಕ ಬಳಸಿಕೊಳ್ಳಲಾಗುವುದು. ಇಲ್ಲಿಯ ತನಕ ಯಾವುದೇ ಸಾವು, ನೋವು ಸಂಭವಿಸಿಲ್ಲ. ಬೆಡ್‍ಗಳಿಗೂ ಕೊರತೆ ಇಲ್ಲ. ಜಿಲ್ಲಾಧಿಕಾರಿ ಮತ್ತು ಸಚಿವರ ನಿರ್ದೇಶನದ ಪ್ರಕಾರ ಯಾವುದೇ ಆರೋಗ್ಯ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು
ತಿಳಿಸಿದರು.

ADVERTISEMENT

ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಿಜಯಪುರದಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಿದೆ. ಎಲ್ಲಾ ರೀತಿಯಲ್ಲಿ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿವೆ ಎಂದರು.

ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾದಾಗಿನಿಂದಲೂ ಸೂಕ್ತ ರೀತಿಯಲ್ಲಿ ಸೋಂಕಿತರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡದಂತೆ ಎಚ್ಚರವಹಿಸಲಾಗುತ್ತಿದೆ. ದಿನನಿತ್ಯ ಬಿಸಿಯೂಟ, ತರಕಾರಿ ಪಲ್ಯ, ಮೊಟ್ಟೆ ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

‘ಆಹಾರದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಇಲ್ಲಿ ಮೊದಲ ಬಾರಿಗೆ 150 ಸೋಂಕಿತರು ಇದ್ದರು. ಪ್ರಸ್ತುತ 7 ಸೋಂಕಿತರು ಮಾತ್ರ ಇದ್ದಾರೆ ಎಂದು ಹೇಳಿದರು.

ಕುಂದಾಣ ಗ್ರಾ.ಪಂ. ಸದಸ್ಯ ಕೆ.ವಿ. ಸ್ವಾಮಿ, ಉಪ ತಹಶೀಲ್ದಾರ್ ಚೈತ್ರಾ, ಹೆಗ್ಗನಹಳ್ಳಿ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯದ ಡಾ.ವಿಜಯಲಕ್ಷ್ಮಿ, ಆರ್‌ಐ ಚಿದಾನಂದ್, ನಾಡ ಕಚೇರಿ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.