ADVERTISEMENT

ಕೆರೆ ಸಂರಕ್ಷಣೆ ಎಲ್ಲರ ಹೊಣೆ

ಬೊಮ್ಮಸಂದ್ರ ಕೆರೆಯ ಪುನರುಜ್ಜೀವನಕ್ಕೆ ₹ 6 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 3:09 IST
Last Updated 20 ಅಕ್ಟೋಬರ್ 2020, 3:09 IST
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಕೆರೆ ಪುನರುಜ್ಜೀವನ ಕಾಮಗಾರಿಗೆ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಬಿ. ಶಿವಣ್ಣ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಕೆರೆ ಪುನರುಜ್ಜೀವನ ಕಾಮಗಾರಿಗೆ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಬಿ. ಶಿವಣ್ಣ ಚಾಲನೆ ನೀಡಿದರು   

ಆನೇಕಲ್:‘ಕೆರೆ, ಕಟ್ಟೆಗಳು ಸೇರಿದಂತೆ ಜಲಮೂಲಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘವು ಬೊಮ್ಮಸಂದ್ರ (ಕಿತ್ತಗಾನಹಳ್ಳಿ) ಕೆರೆಯನ್ನು ₹ 6 ಕೋಟಿ ವೆಚ್ಚದಡಿ ಪುನರುಜ್ಜೀವನಗೊಳಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಬಿಐಎಯಿಂದ ಕೈಗೊಂಡಿರುವ ಕೆರೆ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೈಗಾರಿಕೆಗಳ ಬೆಳವಣಿಗೆಯಿಂದಾಗಿ ಜನಸಂಖ್ಯೆ ಹೆಚ್ಚಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ವಾತಾವರಣ ಕಲುಷಿತವಾಗುತ್ತದೆ. ಕೆರೆಗೆ ಸುತ್ತಮುತ್ತಲಿನ ಕಸವನ್ನು ಹಾಕಿರುವುದರಿಂದ ಕೆರೆ ಹಾಳಾಗಿದೆ. ಕೆರೆಗೆ ಕಾಯಕಲ್ಪ ನೀಡುವ ಸಂಕಲ್ಪ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಹಲವಾರು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬೊಮ್ಮಸಂದ್ರ ಕೈಗಾರಿಕಾ ಸಂಘವು
ಕ್ರಿಯಾಶೀಲವಾಗಿದೆ ಎಂದು ಹೇಳಿದರು.

ADVERTISEMENT

ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್‌ ಮಾತನಾಡಿ, ಬೊಮ್ಮಸಂದ್ರ (ಕಿತ್ತಗಾನಹಳ್ಳಿ) ಕೆರೆಯಲ್ಲಿ ಪುರಸಭೆಯ 5 ಸಾವಿರ ಟನ್‌ನಷ್ಟು ತ್ಯಾಜ್ಯ ತುಂಬಲಾಗಿದೆ. ಈ ಕೆರೆಯನ್ನು ಪುನರುಜ್ಜೀವನಗೊಳಿಸಿ ವಾಕಿಂಗ್‌ ಪಾರ್ಕ್‌ ಮಾಡುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ₹ 6 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮುಂಬರುವ ದಿನಗಳಲ್ಲಿ ವೆಚ್ಚ ಹೆಚ್ಚಾದರೂ ಕೈಗಾರಿಕಾ ಸಂಘವು ಭರಿಸಲು ಸಿದ್ಧವಿದೆ. ಕೆರೆಗೆ ಸುಂದರ ರೂಪ ನೀಡುವುದು ನಮ್ಮ ಗುರಿಯಾಗಿದೆ. ಪುರಸಭೆ ಮತ್ತು ನಗರಾಭಿವೃದ್ಧಿ ಇಲಾಖೆಯ ಮನವಿಯ ಮೇರೆಗೆ ಕೆರೆ ಪುನರುಜ್ಜೀವನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಶಾಸಕ ಬಿ. ಶಿವಣ್ಣ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಾರ್ಯದರ್ಶಿ ನರೇಂದ್ರಕುಮಾರ್‌, ಖಜಾಂಚಿ ಸಂಜೀವ್‌ ಸಾವಂತ್‌, ಜಂಟಿ ಕಾರ್ಯದರ್ಶಿ ಮುರಳಿ, ಪದಾಧಿಕಾರಿಗಳಾದ ಜನಾರ್ದನ್, ರಾಜಶೇಖರ್ ಪಾಟೀಲ್‌, ನೀಲಕಂಠಯ್ಯ, ಶಶಿಕಿರಣ್‌, ವಾಸು, ಮಲ್ಲಿಕಾರ್ಜುನ್, ಲಿಯೋ ಸಿಕ್ವೇರಿಯಾ, ನಾಗರಾಜಶೆಟ್ಟಿ, ಅಶ್ವಥ್, ಮುಖಂಡರಾದ ಎಸ್‌.ಆರ್‌.ಟಿ. ಅಶೋಕ್, ಶಂಕರ್, ಆರ್.ಕೆ. ಕೇಶವ, ಕಿರಣ್ ಹಾಜರಿದ್ದರು.

ದಂಡ ವಿಧಿಸಿದ ನ್ಯಾಯಾಲಯ: ಬೊಮ್ಮಸಂದ್ರ (ಕಿತ್ತಗಾನಹಳ್ಳಿ) ಕೆರೆಯಲ್ಲಿನ ಮಾಲಿನ್ಯದ ಬಗ್ಗೆ ನಾರಾಯಣ ಹೃದಯಾಲಯದ ಸಂಜಯ್‌ ರಾವ್‌ ಅವರು ಹಸಿರು ನ್ಯಾಯಾಲಯ ಮತ್ತು ಮಾಲಿನ್ಯ ನಿಯಂತ್ರಣಾ ಮಂಡಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಲಯವು ಮಧ್ಯಂತರ ಆದೇಶ ನೀಡಿ ರಾಜ್ಯ ಸರ್ಕಾರಕ್ಕೆ ₹ 10 ಲಕ್ಷ ಮತ್ತು ಪುರಸಭೆಗೆ ₹ 5 ಲಕ್ಷ ದಂಡ ವಿಧಿಸಿತ್ತು. ಕಲುಷಿತಗೊಂಡಿರುವ ಕೆರೆಯ ಅಭಿವೃದ್ಧಿಗೆ ಈಗ ಬೊಮ್ಮಸಂದ್ರ ಕೈಗಾರಿಕಾ ಸಂಘ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.