ದೇವನಹಳ್ಳಿ: ಶಿಕ್ಷಕರು ಕೆಲಸ ಮಾಡುವ ಮತಗಟ್ಟೆಗಳಿಗೆ ಅನುಗುಣವಾಗಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಬೇಕು. ಅಲ್ಲಿಯವರೆಗೂ ತಪ್ಪಾಗಿ ನಿಯೋಜಿಸಿರುವ ಪ್ರದೇಶಗಳಲ್ಲಿ ಸಮೀಕ್ಷೆ ಆರಂಭಿಸುವುದಿಲ್ಲ ಎಂದು ಶಿಕ್ಷಕರು ಪಟ್ಟು ಹಿಡಿದ್ದಾರೆ.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಕರಾಗಿ ಸರ್ಕಾರಿ ಶಾಲೆಯ ಶಿಕ್ಷಕರನ್ನು ಕರ್ತವ್ಯ ನಿರ್ವಹಿಸುವ ಸ್ಥಳವನ್ನು ಬಿಟ್ಟು ಬೇರೆ ಪಂಚಾಯಿತಿ ವ್ಯಾಪ್ತಿಗೆ ನೇಮಿಸಿರುವುದು ಸಂಪೂರ್ಣ ಅವೈಜ್ಞಾನಿ ಎಂದು ಆರೋಪಿಸಿ ಪಟ್ಟಣದ ದೇವರಾಜ್ ಅರಸು ಭವನದ ಹಿಂದುಳಿದ ವರ್ಗಗಳ ಇಲಾಖೆ ಮುಂಭಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರಿಗೆ ನಿಯೋಜಿಸಿರುವ ಕರ್ತವ್ಯವನ್ನು ಹಿಂಪಡೆಯಬೇಕು. ಅವರ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮಾತ್ರವೇ ಸಮೀಕ್ಷಕರನ್ನ ನೇಮಿಸಬೇಕು. ಇಲ್ಲದೇ ಇದ್ದರೇ ಶಿಕ್ಷಕರು ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಮುಂಭಾಗ ಪ್ರತಿಭಟಿಸಬೇಕಾಗುತ್ತದೆ ಎಂದು ಸಂಘದ ಆದರ್ಶ್ ಎಚ್ಚರಿಕೆ ನೀಡಿದರು.
ಶಿಕ್ಷಕರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಮೀಕ್ಷಕರ ಪಟ್ಟಿ ತಯಾರಿಸಲಾಗಿದೆ. ಅಂಗವಿಕಲರು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೃತರಾಗಿರುವ ಶಿಕ್ಷಕರನ್ನು ಸಮೀಕ್ಷಕರಾಗಿ ನೇಮಕ ಮಾಡಿರುವುದು ಇದಕ್ಕೆ ನಿದರ್ಶನ. ಅಪಘಾತದಿಂದ ಆಸ್ಪತ್ರೆಯಲ್ಲಿರುವವರು, ಗರ್ಭಿಣಿ ಸ್ತ್ರೀಯರು, ಅಂಗವಿಕಲರು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರನ್ನು ಸಮೀಕ್ಷೆ ಕೆಲಸದಿಂದ ಹೊರಗಿಡಬೇಕು ಎಂದು ಆಗ್ರಹಿಸಿದರು.
ತಂತ್ರಾಂಶ ಕೆಲಸ ಮಾಡುತ್ತಿಲ್ಲ:
ಸಮೀಕ್ಷೆಗಾಗಿ ನೀಡಿರುವ ಮೊಬೈಲ್ ತಂತ್ರಾಂಶ ಕೆಲಸ ಮಾಡುತ್ತಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸದೇ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಎಂದು ಒತ್ತಡ ಹಾಕಿದರೇ ಹೇಗೆ ಸಾಧ್ಯ? ತಂತ್ರಾಂಶವನ್ನು ದೋಷವನ್ನು ಸರಿಪಡಿಸದ ನಂತರ ಸಮೀಕ್ಷೆ ಕೆಲಸ ಮಾಡುತ್ತೇವೆ. ಅಲ್ಲಿಯವರೆಗೂ ಯಾವ ಶಿಕ್ಷಕರಿಗೂ ಅಧಿಕಾರಿಗಳು ಒತ್ತಡ ಹೇರಬಾರದು ಎಂದು ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ತಿಳಿಸಿದರು.
ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗಾಗಿ ರೂಪಿಸಿರುವ ಮೊಬೈಲ್ ತಂತ್ರಾಂಶ ದೋಷದಿಂದ ಕೂಡಿದ್ದು, ಕಾರ್ಯನಿರ್ವಹಿಸುತ್ತಿಲ್ಲ ಇದನ್ನು ಸರಿಪಡಿಸುವವರೆಗೂ ಸಮೀಕ್ಷೆಯ ಮೇಲ್ವಿಚಾರಕರು ಸಮೀಕ್ಷೆ ಮಾಡುವಂತೆ ಯಾವುದೇ ಪರಿಕರ ನೀಡಿದರು ಶಿಕ್ಷಕರು ಸ್ವೀಕರಿಸುವುದಿಲ್ಲ ಎಂದು ಶಿಕ್ಷಕರ ಸಂಘ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.