ADVERTISEMENT

ಗಡಿಸಮಸ್ಯೆ: ಬಾಡಿದ ಮೃತದೇಹ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:10 IST
Last Updated 23 ನವೆಂಬರ್ 2020, 4:10 IST
ಅಪ್ಪಕಾರನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ನಿಂತಿರುವ ಮೃತದೇಹ ಇರುವ ಟಾಟಾ ಏಸ್‌ ವಾಹನ
ಅಪ್ಪಕಾರನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ನಿಂತಿರುವ ಮೃತದೇಹ ಇರುವ ಟಾಟಾ ಏಸ್‌ ವಾಹನ   

ದೊಡ್ಡಬಳ್ಳಾಪುರ: ಕೊಲೆ ನಡೆದಿರುವ ಸ್ಥಳ ಯಾವ ಪೊಲೀಸ್‌ ಠಾಣೆಗೆ ಸೇರುತ್ತದೆ ಎನ್ನುವ ವಿಚಾರವಾಗಿ ಎರಡೂ ಠಾಣೆಗಳ ಪೊಲೀಸರು ಹಾಗೂ ಸಬ್‌ಇನ್‌ಸ್ಪೆಕ್ಟರ್‌ಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಟಾಟಾ ಏಸ್‌ ವಾಹದಲ್ಲೇ ಮೃತದೇಹ ಬಾಡಿ ಹೋದ ಘಟನೆ ಭಾನುವಾರ ತಾಲ್ಲೂಕಿನ ಗಡಿಭಾಗದ ಅಪ್ಪಕಾರನಹಳ್ಳಿ ಗ್ರಾಮದ ಬಳಿ ನಡೆಯಿತು.

ಅಪ್ಪಕಾರನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಎಡಬದಿಯಲ್ಲಿ ರಸ್ತೆಗೆ ಹೊಸದಾಗಿ ಹಾಕಲಾಗಿರುವ ಜಲ್ಲಿಕಲ್ಲಿನಲ್ಲಿ ಹೂತು ಹೋಗಿದ್ದ ಸ್ಥಿತಿಯಲ್ಲಿ ನಿಂತಿದ್ದ ಟಾಟಾ ಏಸ್‌ ವಾಹನದಲ್ಲಿ ಮೃತ ದೇಹ ಇದ್ದದ್ದನ್ನು ಗಮನಿಸಿದ್ದ ಸ್ಥಳೀಯರು ದೊಡ್ಡಬೆಳವಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬೆಳಿಗ್ಗೆ 11ಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದ ದೊಡ್ಡಬೆಳವಂಗಲ ಪೊಲೀಸರು ‘ರಸ್ತೆ ಬಲಭಾಗ ಮಾತ್ರ ನಮ್ಮ ಠಾಣೆ ವ್ಯಾಪ್ತಿಗೆ ಬರುತ್ತದೆ. ಎಡಭಾಗ ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ’ ಎಂದು ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು.

ADVERTISEMENT

ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಬಂದ ತ್ಯಾಮಗೊಂಡ್ಲು ಠಾಣೆ ‘ಪೊಲೀಸರು ನಾವು ಎಂದೂ ಈ ಭಾಗದ ಪ್ರಕರಣಗಳಿಗೆ ಇಲ್ಲಿಗೆ ಬಂದೇ ಇಲ್ಲ. ಈ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುವ ವಾದ ಮಂಡಿಸಲು ಮುಂದಾದರು.

ಇದರಿಂದ ಎರಡು ಠಾಣೆಗಳ ಪೊಲೀಸರು ಹಾಗೂ ಸಬ್‌ ಇನ್‌ಸ್ಪೆಕ್ಟರ್‌ಗಳು ಸಾರ್ವಜನಿಕರ ಸಮ್ಮುಖದಲ್ಲಿ ವಾಗ್ವಾದಕ್ಕೆ ನಿಂತರು. ಅಂತಿಮವಾಗಿ ಹಿರಿಯ ಅಧಿಕಾರಿಗಳ ಸೂಚನೆ ನಂತರ 3 ಗಂಟೆ ವೇಳೆಗೆ ತ್ಯಾಮಗೊಂಡ್ಲು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೃತ ದೇಹವನ್ನು ತೆಗೆದುಕೊಂಡು ಹೋದರು. ಪೊಲೀಸರ ಗಡಿ ವಿವಾದ ಬಗೆಹರಿಯುವವರೆಗೂ ಟಾಟಾ ಏಸ್‌ನಲ್ಲೇ ಇದ್ದ ಮೃತ ಚಾಲಕನ ಬಳಿ ಮೊಬೈಲ್‌ ರಿಂಗ್‌ ಆಗುತ್ತಲೇ ಇತ್ತು.

ಡಿವೈಎಸ್‌ಪಿ ಟಿ.ರಂಗಪ್ಪ ನೀಡಿರುವ ಮಾಹಿತಿಯಂತೆ ‘ಮೃತ ಚಾಲಕ ರಾಜಾನುಕುಂಟೆ ನಿವಾಸಿ ಬೈರೇಗೌಡ(40) ಎಂದು ಗುರುತಿಸಲಾಗಿದೆ. ಬೇರೆಡೆ ಕೊಲೆ ನಡೆಸಿ ಮೃತ ದೇಹ ತಂದು ಹಾಕಿರಬಹುದು. ತನಿಖೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.