ದೊಡ್ಡಬಳ್ಳಾಪುರ:ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಡಲಾಗಿದ್ದ ಗೋದಾಮಿನಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಬಾಶೆಟ್ಟಿಹಳ್ಳಿಯಲ್ಲಿಯೇ ತಾಲ್ಲೂಕಿನ ಅಗ್ನಿಶಾಮಕ ಠಾಣೆ ಇದೆ. ಆದರೆ, ಅಗ್ನಿಶಾಮಕ ವಾಹನ ಬೇರೆಡೆಗೆ ಹೋಗಿ ದ್ದರಿಂದ ಯಲಹಂಕ ಅಗ್ನಿಶಾಮಕ ಠಾಣೆಯಿಂದ ಲಾರಿ ಬಂದು ಬೆಂಕಿ ನಂದಿಸುವುದು ತಡವಾಗಿದೆ. ಹಾಗಾಗಿ, ಗೋದಾಮಿನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಅಗ್ನಿ ಅನಾಹುತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
1ನೇ ಹಂತದಲ್ಲಿದ್ದ ಬಹುತೇಕ ಕೈಗಾರಿಕೆಗಳು 2 ಮತ್ತು 3ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿನ ವಿಶಾಲವಾದ ಜಾಗಗಳಿಗೆ ಸ್ಥಳಾಂತರವಾಗುತ್ತಿವೆ. ಹೀಗಾಗಿ, ಇಲ್ಲಿನ ಬಹುತೇಕ ಕೈಗಾರಿಕೆಗಳ ಮಾಲೀಕರು ಹಳೇಯ ಕಟ್ಟಡಗಳನ್ನು ಗೋದಾಮುಗಳಾಗಿ ಬಳಸುತ್ತಿದ್ದಾರೆ. ಆದರೆ, ಅಗ್ನಿ ಅನಾಹುತ ನಡೆದಾಗ ಬೆಂಕಿ ನಂದಿಸುವ ಯಾವುದೇ ಮುನ್ನೆಚ್ಚರಿಕೆ ಕ್ರಮ ಪಾಲಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.