ADVERTISEMENT

ದೇವನಹಳ್ಳಿ: ಗ್ರಂಥಾಲಯ ಜಾಗದಲ್ಲಿ ದೇವಸ್ಥಾನ ರಥ ನಿಲುಗಡೆಗೆ!

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 4:48 IST
Last Updated 12 ಮಾರ್ಚ್ 2023, 4:48 IST
ದೇವನಹಳ್ಳಿಯ ಚನ್ನರಾಯಪಟ್ಟಣದ ಪಂಚಾಯಿತಿಗೆ ಹೊಂದಿಕೊಂಡಿರುವ ಗ್ರಂಥಾಲಯ ಜಾಗದಲ್ಲಿ ರಥ ನಿಲುಗಡೆಯ ಶೆಡ್‌ ನಿರ್ಮಾಣ ಆಗುತ್ತಿದೆ
ದೇವನಹಳ್ಳಿಯ ಚನ್ನರಾಯಪಟ್ಟಣದ ಪಂಚಾಯಿತಿಗೆ ಹೊಂದಿಕೊಂಡಿರುವ ಗ್ರಂಥಾಲಯ ಜಾಗದಲ್ಲಿ ರಥ ನಿಲುಗಡೆಯ ಶೆಡ್‌ ನಿರ್ಮಾಣ ಆಗುತ್ತಿದೆ   

ದೇವನಹಳ್ಳಿ: ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಹೊಂದಿಕೊಂಡಿರುವ ಗ್ರಂಥಾಲಯ ಜಾಗವನ್ನು ಕಬಳಿಸಿರುವ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಅದರಲ್ಲಿ ಶನಿವಾರ ವಲ್ಲಿ ಸಮೇತ ಸುಬ್ರಮಣ್ಯ ದೇಗುಲದ ರಥ ನಿಲ್ಲಿಸುವ ಶೆಡ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಎರಡನೇ ಶನಿವಾರ ಮತ್ತು ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ಕಾರಣ ಮತ್ತು ಮತ್ತು ಸಾಕಷ್ಟು ಅಧಿಕಾರಿಗಳು ಚುನಾವಣಾ ಕರ್ತವ್ಯದ ಮೇಲೆ ಹೋಗಿರುವ ಸಮಯ ನೋಡಿಕೊಂಡು ದೇವರ ಹೆಸರಿನಲ್ಲಿ ಜಾಗ ವಶಕ್ಕೆ ಪಡೆಯುವ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಸ್ಥಳದಲ್ಲಿದ್ದ ಹಳೆ ಶಾಲಾ ಕಟ್ಟಡವು ನಂತರದಲ್ಲಿ ಗ್ರಂಥಾಲಯವಾಗಿ ಬದಲಾಗಿತ್ತು. ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಅದನ್ನು ನೆಲಸಮ ಮಾಡಿದ ಪಂಚಾಯಿತಿ ಅಲ್ಲಿದ್ದ ಸಾಮಗ್ರಿಗಳನ್ನು ಹಾರಾಜಿನ ಮೂಲಕ ಮಾರಾಟ ಮಾಡಿದೆ.

ADVERTISEMENT

ಆದರೆ, ಗ್ರಾಮ ಪಂಚಾಯಿತಿಯು ಪುನಃ ಈ ಜಾಗದಲ್ಲಿ ಹೊಸ ಗ್ರಂಥಾಲಯ ನಿರ್ಮಾಣ ಮಾಡಿರಲಿಲ್ಲ. ಗ್ರಂಥಾಲಯದ ಜಾಗ ಕಬಳಿಕೆಯಾದರೂ ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಆಕ್ಷೇಪ ಎತ್ತಿರಲಿಲ್ಲ.

ಗ್ರಂಥಾಲಯಕ್ಕೆ ಸೇರಿರುವ ಜಾಗದಲ್ಲಿ ರಥ ನಿಲುಗಡೆಗೆ ಅವಕಾಶ ಕೋರಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಲ್ಲಿ ಕೆಲವರು ಮನವಿ ಸಲ್ಲಿಸಿದ್ದರು. ಅದಕ್ಕೆ ಅವಕಾಶ ನೀಡದಂತೆ ಸ್ಥಳೀಯರು ತಕರಾರು ಸಲ್ಲಿಸಿದ್ದಾರೆ.
ಅದೇ ಜಾಗದಲ್ಲಿ ನೂತನ ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಥಕ್ಕಿಂತ ಗ್ರಂಥಾಲಯ ಮುಖ್ಯ: ‘ಧರ್ಮಾಚರಣೆಗೆ ಯಾವುದೇ ವಿರೋಧವಿಲ್ಲ. ಗ್ರಾಮದಲ್ಲಿ ರಥ ನಿಲುಗಡೆಗೆ ಸಾಕಷ್ಟು ಜಾಗವಿದೆ. ಆದರೆ ಪಂಚಾಯಿತಿಗೆ ಹೊಂದಿಕೊಂಡಿರುವ ಜಾಗಲದಲ್ಲಿ ಗ್ರಂಥಾಲಯವಿದ್ದರೇ ಸಾಕಷ್ಟು ಅನುಕೂಲವಾಗಲಿದೆ. ಒಂದು ಬಾರಿ ದೇಗುಲದ ಆಸ್ತಿ ಎಂದು ನಿರ್ಣಯ ಮಾಡಿದ್ದಲ್ಲಿ ಅದನ್ನು ಯಾವುದೇ ಇತರ ಉದ್ದೇಶಕ್ಕೆ ಉಪಯೋಗಿಸಲು ಬರುವುದಿಲ್ಲ’ ಎಂದು ಗ್ರಾಮಸ್ಥ ವೆಂಕಟರಮಣಪ್ಪ ಅವರ ವಾದ.

‘ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಉಪಕರಣಗಳ ಕಾಲೇಜು ನಿರ್ಮಾಣ ಆಗಿದೆ. ಇಲ್ಲಿಗೆ ಸಾವಿರಾರು ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಗ್ರಾಮದ ಯುವಕರಿಗೆ ಸೂಕ್ತವಾಗಿ ಅಧ್ಯಯನ ಮಾಡಲು ಗ್ರಂಥಾಲಯ ಬೇಕು. ಭವಿಷ್ಯದಲ್ಲಿ ಚನ್ನರಾಯಪಟ್ಟಣವೂ ವಿದ್ಯಾ ನಗರಿಯಾಗಿ ಬೆಳೆಯಬಹುದು. ರಥ ನಿಲುಗಡೆಗಿಂತ ಗ್ರಂಥಾಲಯವೇ ಬೇಕು’ ಎನ್ನುವುದು ಗ್ರಾಮದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ತಕರಾರು ಅರ್ಜಿ ಬಾಕಿ: ಈಗಾಗಲೇ ವಲ್ಲಿ ಸಮೇತ ಸುಬ್ರಮಣ್ಯ ಸ್ವಾಮಿ ದೇಗುಲದ ರಥ ನಿಲುಗಡೆ ವಿಚಾರವಾಗಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ತಕಾರರು ಅರ್ಜಿ ಬಾಕಿ ಇದೆ. ಹೀಗಿರುವಾಗ ಜಾಗವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಅಕ್ರಮ ನಿರ್ಮಾಣ ತೆರವಿಗೆ ಬದ್ಧ: ‘ಗ್ರಂಥಾಲಯ ಜಾಗದಲ್ಲಿ ರಥ ನಿಲುಗಡೆಗೆ ವ್ಯವಸ್ಥೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಗ್ರಂಥಾಲಯದ ಜಾಗ ಜಿಲ್ಲಾ ಗ್ರಂಥಾಲಯ ಇಲಾಖೆಯಲ್ಲಿ ಸುಪರ್ದಿಯಲ್ಲಿದೆಯೇ ಅಥವಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ, ಅಕ್ರಮ ನಿರ್ಮಾಣವನ್ನು ತೆರವುಗೊಳಿಸಲು ಬದ್ಧವಾಗಿದ್ದೇವೆ’ ಎಂದು ಚನ್ನರಾಯಪಟ್ಟಣ ಪಿಡಿಓ ಮುನಿರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.