ADVERTISEMENT

ಕೀಳರಿಮೆ ತ್ಯಜಿಸಲು ವಿದ್ಯಾರ್ಥಿಗಳಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:37 IST
Last Updated 5 ಜುಲೈ 2022, 4:37 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಏಕಾಶಿಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನಗರದ ಎಂ.ಎಸ್.ವಿ ಶಾಲೆಯಿಂದ ಕಲಿಕಾ ಸಾಮಗ್ರಿ ವಿತರಿಸಲಾಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಏಕಾಶಿಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನಗರದ ಎಂ.ಎಸ್.ವಿ ಶಾಲೆಯಿಂದ ಕಲಿಕಾ ಸಾಮಗ್ರಿ ವಿತರಿಸಲಾಯಿತು   

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಸ್ಥಾನದಲ್ಲಿದ್ದಾರೆ. ಸರ್ಕಾರಿ ಶಾಲೆ ಎಂಬ ಕೀಳರಿಮೆಯನ್ನು ಬೆಳೆಸಿಕೊಳ್ಳದೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಶ್ರೀಕಂಠ ಹೇಳಿದರು.

ತಾಲ್ಲೂಕಿನ ಏಕಾಶಿಪುರ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಗರದ ಎಂ.ಎಸ್.ವಿ. ಶಾಲೆಯಿಂದ ನೀಡಲಾದ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳು ಸಹ ಸಮುದಾಯದ ಸಹಕಾರದೊಂದಿಗೆ ಮೂಲ ಸೌಕರ್ಯ ಹೊಂದುತ್ತಿರುವುದು ಉತ್ತಮ ಬೆಳವಣಿಗೆ. ನನ್ನ ವಿದ್ಯಾಭ್ಯಾಸ ಸಹ ಸರ್ಕಾರಿ ಶಾಲೆಯಲ್ಲಿಯೇ ಪೂರ್ಣಗೊಂಡಿದೆ. ಶಾಲೆಯ ಮಕ್ಕಳು ವಿದ್ಯಾಭ್ಯಾಸದತ್ತ ಹೆಚ್ಚು ಗಮನಹರಿಸಿ ಉತ್ತಮ ಅಂಕಗಳಿಸಬೇಕಿದೆ. ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ನೆರವಿನ ಹಸ್ತ ಚಾಚುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಅಲ್ಲದೆ ಸರ್ಕಾರಿ ಶಾಲೆಗಳ ಏಳಿಗೆಗೆ ಸಹಕಾರಿಯಾಗಲಿದೆ’ ಎಂದುತಿಳಿಸಿದರು.

ADVERTISEMENT

ಎಂ.ಎಸ್.ವಿ. ಶಾಲೆಯ ಅಧ್ಯಕ್ಷ ಎ. ಸುಬ್ರಮಣ್ಯ ಮಾತನಾಡಿ, ‘ನನ್ನ ಹುಟ್ಟೂರಿನ ಶಾಲೆಯಲ್ಲಿ ವೇದಿಕೆ ಹಂಚಿಕೊಂಡಿರುವುದು ಹೆಮ್ಮೆಯ ವಿಷಯ. ಶಾಲಾ ದಿನಗಳಲ್ಲಿ ತಂದೆಯವರ ಸೂಚನೆಯಂತೆ ಪತ್ರಿಕೆ ಓದುವ ಅಭ್ಯಾಸ, ದೂರದರ್ಶನದಲ್ಲಿ ವಾರ್ತೆ ವೀಕ್ಷಿಸುವ ಅಭ್ಯಾಸದಿಂದ ಹೆಚ್ಚಿನ ಜ್ಞಾನಾರ್ಜನೆಗೆ ಅನುಕೂಲವಾಯಿತು’ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಂಗಪ್ಪ, ಎಂ.ಎಸ್.ವಿ. ಶಾಲೆಯ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಏಕಾಶಿಪುರ ಗ್ರಾಮ ಪಂಚಾಯಿತಿ ಸದಸ್ಯ ಎ. ರಾಜಣ್ಣ, ಎಂಪಿಸಿಎಸ್ ಅಧ್ಯಕ್ಷ ರಾಜಣ್ಣ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.