ADVERTISEMENT

ಸ್ಫೋಟಕ ಸಾಗಣೆ ಮೇಲೆ ನಿಗಾ

ಅನಧಿಕೃತ ಗಣಿಗಾರಿಕೆ ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 4:54 IST
Last Updated 28 ಫೆಬ್ರುವರಿ 2021, 4:54 IST
ಸಭೆಯಲ್ಲಿ ಕೆ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಕೆ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.   

ದೇವನಹಳ್ಳಿ: ಜಿಲ್ಲೆಯಲ್ಲಿ ಅನಧಿಕೃತ, ಕಾನೂನು ಬಾಹಿರ, ಅವೈಜ್ಞಾನಿಕ ಗಣಿಗಾರಿಕೆ ಮತ್ತು ಕಲ್ಲುಪುಡಿ ಮಾಡುವ ಕೆಲಸ ನಡೆಯದಂತೆ ಎಚ್ಚರಿಕೆ ವಹಿಸಬೇಕು.

ಯಾವುದೇ ರೀತಿ ಅಹಿತಕರ ಘಟನೆಗಳಿಗೆ ಅಧಿಕಾರಿಗಳು ಆಸ್ಪದ ನೀಡಬಾರದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ‌ರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್(ಗಣಿ) ಸಮಿತಿ ಮತ್ತು ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಲುಪುಡಿ ಮಾಡುವವರು ಸರ್ಕಾರದಿಂದ ಲೈಸೆನ್ಸ್ ಪಡೆದು, ಪರಿಣಿತಿ ಹೊಂದಿರಬೇಕು ಜತೆಗೆ ತಂತ್ರಜ್ಞಾನದ ಬಗ್ಗೆ ಅರಿವಿರಬೇಕು ಎಂದು ಹೇಳಿದರು.

ADVERTISEMENT

ಅಕ್ರಮವಾಗಿ ನಡೆಯುತ್ತಿರುವ ಕಲ್ಲುಕ್ವಾರಿ ಮತ್ತು ಬ್ಲಾಸ್ಟಿಂಗ್ ಚಟುವಟಿಕೆ ಸಂಪೂರ್ಣವಾಗಿ ನಿಲ್ಲಬೇಕು. ಈ ಸಂಬಂಧ ತಾಲ್ಲೂಕು ಮಟ್ಟದಲ್ಲಿ ಒಂದು ಸಮಿತಿ ರಚಿಸಿ ನಿಯಮಗಳ ಪಾಲನೆ ಕುರಿತು ಪರಿಶೀಲಿಸಬೇಕು ಎಂದರು.

ಸ್ಫೋಟ ವಸ್ತುಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಸಾಗಣೆ ಮತ್ತು ಎಷ್ಟು ಪ್ರಮಾಣದಲ್ಲಿ ಸ್ಪೋಟಕ ವಸ್ತುಗಳನ್ನು ಶೇಖರಿಸಿ ಸಾಗಣೆ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟವರು ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಮಾತನಾಡಿ, ಜನರ ಜೀವನ ಕುರಿತು ಸುರಕ್ಷತೆ ಗಮನದಲ್ಲಿಟ್ಟುಕೊಳ್ಳದೆ ಕ್ವಾರಿ ನಡೆಸುವುದರಿಂದ ಅನಾಹುತ ಹೆಚ್ಚಾಗುವುದರ ಜತೆಯಲ್ಲಿ ಸ್ಥಳೀಯವಾಗಿ ಬೆಳೆ ಹಾಗೂ ಸಾರ್ವಜನಿಕರಿಗೂ ತೊಂದರೆ ಆಗಲಿದೆ ಎಂದರು.

ಕಲ್ಲುಗಣಿ ಸ್ಫೋಟದಿಂದ ಬೆಳೆ ನಾಶದ ಬಗ್ಗೆ ಹಲವು ದೂರುಗಳು ಬಂದಿದ್ದು, ಅಂತಹವರ ವಿರುದ್ಧ ಶೀಘ್ರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್ .ಕೆ.ನಾಯಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪನ್, ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಲಕ್ಷ್ಮಿ ಗಣೇಶ್, ಉಪವಿಭಾಗಧಿಕಾರಿ ಅರುಳ್ ಕುಮಾರ್, ಡಿವೈಎಸ್ಪಿ ಟಿ.ರಂಗಪ್ಪಸೇರಿದಂತೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.