ADVERTISEMENT

ದುಬಾರಿ ಶುಲ್ಕ ನಿಗದಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:54 IST
Last Updated 20 ಅಕ್ಟೋಬರ್ 2020, 2:54 IST
ದೇವನಹಳ್ಳಿಯ ರಸ್ತೆಬದಿಯಲ್ಲಿ ನಡೆಯುತ್ತಿರುವ ತರಕಾರಿ ವ್ಯಾಪಾರ 
ದೇವನಹಳ್ಳಿಯ ರಸ್ತೆಬದಿಯಲ್ಲಿ ನಡೆಯುತ್ತಿರುವ ತರಕಾರಿ ವ್ಯಾಪಾರ    

ದೇವನಹಳ್ಳಿ: ಪುರಸಭೆ ಆಡಳಿತವು ದುಬಾರಿ ಶುಲ್ಕ ವಸೂಲಾತಿಗೆ ಮುಂದಾಗಿರುವುದಕ್ಕೆ ವ್ಯಾಪಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಲಾಕ್‌ಡೌನ್‌ ಜಾರಿಯಾಗಿದ್ದ ವೇಳೆ ಸರಕು ಸಾಗಾಣಿಕೆ ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ತರಕಾರಿ, ಹಾಲು ಮಾರಾಟ, ದಿನಸಿ ಅಂಗಡಿಯ ವ್ಯಾಪಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿತ್ತು. ಇದರ ಪರಿಣಾಮ ಬೀದಿಬದಿ ವ್ಯಾಪಾರಿಗಳು ವಹಿವಾಟು ಇಲ್ಲದೆ ಆರ್ಥಿಕ ನಷ್ಟ ಅನುಭಿಸಬೇಕಾಯಿತು.

ಕಳೆದ ಒಂದು ತಿಂಗಳಿಂದ ಕೋವಿಡ್‌ ಮಾರ್ಗಸೂಚಿ ಸಡಿಲಿಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಸಾರ್ವಜನಿಕರು ಮನೆ ಬಿಟ್ಟು ಹೊರಬರುತ್ತಿಲ್ಲ. ಹೀಗಿರುವಾಗ ಪುರಸಭೆಯು ಏಕಾಏಕಿ ದುಪ್ಪಟ್ಟು ಶುಲ್ಕ ವಿಧಿಸಿ ನಮ್ಮ ಬದುಕಿಗೆ ಬರೆ ಎಳೆಯಲು ಹೊರಟಿದೆ ಎಂಬುದು ವ್ಯಾಪಾರಿಗಳ ದೂರು.

ADVERTISEMENT

‘ಕೊರೊನಾ ಪರಿಣಾಮ ತೋಟಗಾರಿಕೆ ಮತ್ತು ತರಕಾರಿ ಪೂರೈಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಗ್ರಾಹಕರ ಸ್ಪಂದನೆಯೂ ನೀರಸವಾಗಿದೆ. ಬೀದಿಬದಿಯ ತಳ್ಳುವಗಾಡಿಯಲ್ಲಿ ಮಾರಾಟ ಮಾಡುವ ಕೋಳಿ ಮಾಂಸದಿಂದ ತಯಾರಿಸಿದ ರುಚಿಕರ ಖಾದ್ಯಗಳಿಗೆ ಈ ಹಿಂದೆ ಗ್ರಾಹಕರು ಮುಗಿಬೀಳುತ್ತಿದ್ದರು. ಪ್ರಸ್ತುತ ಕೋಳಿ ಮಾಂಸ, ಮೊಟ್ಟೆ, ಕುರಿ ಮಾಂಸದ ಬೆಲೆಯೂ ಗಗನಕ್ಕೇರಿದೆ. ಗಿರಾಕಿಗಳು ಇತ್ತ ತಿರುಗಿ ನೋಡುವುದಿಲ್ಲ.ಇಂತಹ ಸಂಕಷ್ಟದ ನಡುವೆಯೇ ಪ್ರತಿದಿನ ₹ 100 ರಿಂದ ₹ 150 ಶುಲ್ಕ ನೀಡಬೇಕು. ಈ ಹಿಂದೆ ₹ 40 ರಿಂದ ₹ 50 ನಿಗದಿಪಡಿಸಲಾಗಿತ್ತು. ಅಧಿಕಾರಶಾಹಿಯ ಈ ನಿರ್ಧಾರ ಖಂಡನೀಯ’ ಎನ್ನುತ್ತಾರೆ ವ್ಯಾಪಾರಿ ಗಜಪತಿ.

‘ಪುರಸಭೆಗೆ ಸ್ವಂತ ಸಂತೆ ಮೈದಾನವಿಲ್ಲ. ದೈನಂದಿನ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಬೀದಿಯಲ್ಲಿ ವಹಿವಾಟು ನಡೆಸಿ ಜೀವನ ಸಾಗಿಸಬೇಕು. ಕುಡಿಯುವ ನೀರು, ಶೌಚಾಲಯ ಸೌಲಭ್ಯವೂ ಇಲ್ಲ. ಅಧಿಕಾರಿಗಳಿಗೆ ಮಾತ್ರ ಸುಂಕ ವಸೂಲಿಯಾಗಬೇಕು. ಕೊರೊನಾ ಸಂಕಷ್ಟದಲ್ಲಿ ಬೀದಿಬದಿ ವ್ಯಾಪಾರಿಗಳ ಜೀವನ ನಿರ್ವಹಣೆ ಬಗ್ಗೆ ಸರ್ಕಾರ, ಪುರಸಭೆ ಆಡಳಿತ ಗಮನಹರಿಸಿಲ್ಲ’ ಎಂದು ಕಿಡಿಕಾರುತ್ತಾರೆ ಅನಸೂಯಮ್ಮ.

‘ದಿನದ ಖಾಸಗಿ ಸಾಲ ಪಡೆದು ಮಾರುಕಟ್ಟೆಗೆ ಹೋಗಿ ಸರಕು ತಂದು ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಮಾರಾಟ ಮಾಡಿ ಬಡ್ಡಿಸಹಿತ ಸಾಲ ಮರುಪಾವತಿ ಮಾಡಬೇಕು. ಪುರಸಭೆಗೆ ಶುಲ್ಕ ಕಟ್ಟುವುದು ಕಷ್ಟಕರ. ಸರ್ಕಾರ 2021ರ ಮಾರ್ಚ್‌ 31ರವರೆಗೆ ವ್ಯಾಪಾರಿಗಳಿಗೆ ನಿಗದಿಪಡಿಸಿರುವ ಶುಲ್ಕವನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸುತ್ತಾರೆ ತರಕಾರಿ ವ್ಯಾಪಾರಿ ಮಂಜಣ್ಣ.

‘ಬೀದಿಬದಿ ವ್ಯಾಪಾರಿಗಳು ಆರೋಪಿಸುವಷ್ಟು ದುಬಾರಿ ಶುಲ್ಕ ನಿಗದಿಪಡಿಸಿಲ್ಲ. ಕಳೆದ ವರ್ಷದ ಮಾರ್ಚ್‌ನಲ್ಲಿ ನಿಗದಿಪಡಿಸಿದ್ದ ದರ ಇದಾಗಿದೆ. ಕೊರೊನಾ ಸೋಂಕಿನ ಪರಿಣಾಮ ಕಳೆದ ಆರು ತಿಂಗಳಿಂದ ಶುಲ್ಕ ವಸೂಲಿ ಮಾಡಿಲ್ಲ. ಇನ್ನು ಒಂದು ವರ್ಷದವರೆಗೆ ಶುಲ್ಕ ಹೆಚ್ಚಳ ಮಾಡುವುದಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್‍. ನಾಗರಾಜ್‍ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.