ADVERTISEMENT

ಟ್ರಾಫಿಕ್ ಸಮಸ್ಯೆ ವ್ಯಾಪಾರಸ್ಥರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:39 IST
Last Updated 13 ಫೆಬ್ರುವರಿ 2019, 14:39 IST
ವಿಜಯಪುರದ ಗಾಂಧಿಚೌಕದಿಂದ ಬಸ್ ನಿಲ್ದಾಣದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವುದು 
ವಿಜಯಪುರದ ಗಾಂಧಿಚೌಕದಿಂದ ಬಸ್ ನಿಲ್ದಾಣದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವುದು    

ವಿಜಯಪುರ: ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವ ವಾಹನಗಳಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವುದರ ಜೊತೆಗೆ, ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತಿದೆ ಎಂದು ವ್ಯಾಪಾರಸ್ಥ ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

‘ಇಲ್ಲಿನ ಹಳೇ ಕೆನರಾ ಬ್ಯಾಂಕ್ ರಸ್ತೆ, ಹಳೇ ಪುರಸಭಾ ಕಾರ್ಯಾಲಯದ ರಸ್ತೆ, ವೆಂಕಟರಮಣಸ್ವಾಮಿ ದೇವಾಲಯದ ರಸ್ತೆಯೂ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ವಾಹನಗಳಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಬಸ್ ನಿಲ್ದಾಣದ ಸಮೀಪದ ರಸ್ತೆಗಳಲ್ಲೂ ಕಾರುಗಳನ್ನು ನಡು ರಸ್ತೆಗಳಲ್ಲಿ ನಿಲ್ಲಿಸಿ ಹೋಗುತ್ತಾರೆ. ಗಂಟೆಗಟ್ಟಲೇ ತೆಗೆಯುವುದಿಲ್ಲ. ಇದರಿಂದ ನಾವು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ’ ಎಂದರು.

‘ವಾಹನಗಳನ್ನು ಅಡ್ಡ ನಿಲ್ಲಿಸುತ್ತಿರುವುದರಿಂದ ಗ್ರಾಹಕರೂ ಬರುವುದಿಲ್ಲ, ನಾವು ಅಂಗಡಿಗಳಿಗೆ ಬಾಡಿಗೆ ಕಟ್ಟುವುದು ಹೇಗೆ. ಜೀವನ ಮಾಡುವುದು ಹೇಗೆ ಎಂದು ನಾವು ಅವರನ್ನು ಕೇಳಿದರೆ, ನೀವೇನು ರೋಡಿಗೆ ಬಾಡಿಗೆ ಕಟ್ತೀರಾ ಎಂದು ದಬಾಯಿಸುತ್ತಾರೆ’ ಎಂದರು.

ADVERTISEMENT

ಮುಖಂಡ ಹರೀಶ್ ಕುಮಾರ್ ಮಾತನಾಡಿ, ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಅಂಗಡಿಗಳನ್ನು ರಸ್ತೆಗಳಲ್ಲೇ ಇಟ್ಟುಕೊಂಡಿದ್ದಾರೆ. ಇದನ್ನು ಕಂಡು ಕಾಣದಂತೆ ವರ್ತನೆ ಮಾಡುತ್ತಿರುವ ಪುರಸಭಾ ಅಧಿಕಾರಿಗಳು ತೆರವು ಮಾಡುವ ಗೋಜಿಗೆ ಹೋಗಿಲ್ಲ. ಹಳೇ ಪುರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಹಣ್ಣಿನ ಅಂಗಡಿಗಳನ್ನು ರಸ್ತೆಗೆ ಇಟ್ಟಿದ್ದಾರೆ. ತಿರುವುಗಳಲ್ಲಿ ಎದುರಿಗೆ ಬರುವ ವಾಹನಗಳು ಕಾಣಿಸದೆ ಅಪಘಾತಗಳಾಗುತ್ತಿವೆ. ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಕುರಿತು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ಹಣ್ಣಿನ ಅಂಗಡಿಗಳನ್ನು ಇಟ್ಟಿರುವ ಜಾಗದಲ್ಲಿ ಪುರಸಭೆಯ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಿಕ್ಕೆ ಅನುದಾನ ಬಿಡುಗಡೆಯಾಗುತ್ತಿದೆ. ಅದು ಟೆಂಡರ್ ಆದ ಕೂಡಲೇ ಅಲ್ಲಿಂದ ಅಂಗಡಿಗಳನ್ನು ತೆರವುಗೊಳಿಸುತ್ತೇವೆ. ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಲಿಕ್ಕೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ರಸ್ತೆಗಳಲ್ಲಿ ವಾಹನಗಳನ್ನು ಬಿಟ್ಟುಹೋಗಿರುವುದು ಕಂಡು ಬಂದರೆ ಅಂತಹ ವಾಹನಗಳ ಮೇಲೆ ಪೊಲೀಸರಿಗೆ ನಾವೇ ದೂರುಕೊಡುವ ವ್ಯವಸ್ಥೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.