ADVERTISEMENT

ಸಂಸ್ಥೆಗೆ ಸೇವೆಯೇ ತರಬೇತಿ ಶುಲ್ಕ

ಜೀವನ ಶಿಕ್ಷಣ ನೀಡುವುದೇ ಪಲೋಮ ಸಂಸ್ಥೆ ಧ್ಯೇಯ * ಸರ್ಕಾರಿ ಶಾಲೆಯಲ್ಲಿ ಕಲಿತರೆ ಉಚಿತ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 12:59 IST
Last Updated 2 ಮಾರ್ಚ್ 2019, 12:59 IST
ಪಲೋಮ ಪ್ರತಿಷ್ಠಾನದ ಕೌಶಲ ತರಬೇತಿ
ಪಲೋಮ ಪ್ರತಿಷ್ಠಾನದ ಕೌಶಲ ತರಬೇತಿ   

ಆನೇಕಲ್: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅನುತ್ತೀರ್ಣ ಆಗುವುದು ಸಹಜ. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಪಾಸಾಗುವುದನ್ನು ಕಲಿಸುವ ಸಂಸ್ಥೆಯೇ ಪಲೋಮ ಪ್ರತಿಷ್ಠಾನ. ಈ ಪ್ರತಿಷ್ಠಾನ ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳಲ್ಲಿ ತರಬೇತಿ ನೀಡಿ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ.

ತಾಲ್ಲೂಕಿನ ಬಂಡಾಪುರ ಸಮೀಪವಿರುವ ಈ ಸಂಸ್ಥೆಯು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣ, ಡಿಗ್ರಿ, ಐಟಿಐ, ಡಿಪ್ಲೊಮೊ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಾಲ್ಕು ತಿಂಗಳ ಸಂಪೂರ್ಣ ಉಚಿತ ತರಬೇತಿ ನೀಡಿ ಉದ್ಯೋಗ ಪಡೆಯಲು ಸಹಾಯ ನೀಡುತ್ತದೆ.

ಈ ತರಬೇತಿಯಲ್ಲಿ ಸ್ಪೋಕನ್ ಇಂಗ್ಲಿಷ್, ಬೇಸಿಕ್ ಕಂಪ್ಯೂಟರ್, ಟ್ಯಾಲಿ, ವ್ಯವಹಾರ ಅಭಿವೃದ್ಧಿ ಕೌಶಲ ತರಬೇತಿ ನೀಡಿ ಉದ್ಯೋಗಕ್ಕೂ ನೆರವು ನೀಡುತ್ತದೆ. ತರಬೇತಿಗೆ ಬರುವ ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡುತ್ತದೆ. ತಾಲ್ಲೂಕಿನ ದೊಮ್ಮಸಂದ್ರ, ಸರ್ಜಾಪುರ, ಅತ್ತಿಬೆಲೆ, ಚಂದಾಪುರ, ಹೆಬ್ಬಗೋಡಿ ಸೇರಿದಂತೆ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ತರಬೇತಿಗೆ ಬರುತ್ತಾರೆ.

ADVERTISEMENT

ಕೌಶಲ ತರಬೇತಿ ಶಿಬಿರದಲ್ಲಿ ಸಂವಹನ, ಹಣಕಾಸು ನಿರ್ವಹಣೆ, ಸಮಯ ನಿರ್ವಹಣೆ, ನಾಯಕತ್ವಗುಣ, ಆರೋಗ್ಯ ಅಭಿವೃದ್ಧಿ, ಸಮಸ್ಯೆಗಳ ನಿರ್ವಹಣೆ ಸೇರಿದಂತೆ ಉದ್ಯೋಗಕ್ಕೆ ಪೂರಕ ತರಬೇತಿ ನೀಡುತ್ತದೆ. ನಿರುದ್ಯೋಗ ನಿವಾರಣೆ ಕೌಶಲದಿಂದ ಮಾತ್ರ ಸಾಧ್ಯ ಎಂಬುದು ಪ್ರತಿಷ್ಠಾನದ ಧ್ಯೇಯ. ಯುವ ಸಮುದಾಯ ಪದವಿ ಮತ್ತು ಪದವಿ ಪೂರ್ವ ಶಿಕ್ಷಣದಲ್ಲಿ ಉನ್ನತ ಅಂಕಗಳಿಸಿದ್ದರೂ ಉದ್ಯೋಗ ಪಡೆಯುವುಲ್ಲಿ ವಿಫಲರಾಗುತ್ತಾರೆ. ಈ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿಗೆ ಸಂಸ್ಥೆ ವಿವಿಧ ಯೋಜನೆಗಳನ್ನು ರೂಪಿಸಿದೆ ಎನ್ನುತ್ತಾರೆ ಕೇಂದ್ರದ ಸಂಯೋಜಕ ಜಯರಾಜ್

ಪಲೋಮ ಪ್ರತಿಷ್ಠಾನದಲ್ಲಿ ತರಬೇತಿ ಪಡೆದವರು ಅಮೆಜಾನ್, ಫ್ಲಿಪ್‌ಕಾರ್ಟ್, ಮೈಕ್ರೋಸಾಫ್ಟ್ ಅಂತಹ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಗಳಿಸಿರುವುದು ಸಂಸ್ಥೆಯ ಯಶೋಗಾಥೆಗೆ ಸಾಕ್ಷಿ. ಇದೊಂದು ಉದ್ಯೋಗಾಧಾರಿತ ಕಾರ್ಯಕ್ರಮವಾಗಿದ್ದು ತರಬೇತಿ ಜತೆಗೆ ಸ್ಪರ್ಧಾತ್ಮಕ ಮನೋಭಾವನೆ, ವಾಣಿಜ್ಯ, ಯೋಗ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದೆ.

ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಯುವಕರಿಗೆ ಶಿಕ್ಷಣ, ಶಿಸ್ತು, ನಾಯಕತ್ವಗುಣ ಹಾಗೂ ಸೇವಾ ಮನೋಭಾವನೆ ಬೆಳೆಸುವುದು ಪ್ರತಿಷ್ಠಾನದ ಉದ್ದೇಶ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕಿ ರೀನಾ.

ಪಲೋಮ ಸಂಸ್ಥೆ ಮುಂದಿನ ದಿನಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ವಿಸ್ತರಿಸುವ ಗುರಿ ಹೊಂದಿದೆ. ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಪಿಯುಸಿ ಶಿಕ್ಷಣ ನೀಡುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.